ಗಾಯದ ಮೇಲೆ ಬರೆ; ಕಮರ್ಷಿಯಲ್ ಸಿಲಿಂಡರ್ ದರ 195ರೂ. ಹೆಚ್ಚಳ.
ನವದೆಹಲಿ : ಕಮರ್ಷಿಯಲ್ ಸಿಲಿಂಡರ್ ಅಭಾವದ ನಡುವೆ ಬಳಕೆದಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಹಿನ್ನೆಲೆ ಜಾಗತಿಕ ತೈಲ ಬೆಲೆ ಏರಿಕೆಯಾಗಿರುವ ಕಾರಣ, ಇಂದಿನಿಂದ (ಏಪ್ರಿಲ್ 1) ವಾಣಿಜ್ಯ ಬಳಕೆಯ LPG ಸಿಲಿಂಡರ್‌ಗಳ ಬೆಲೆಯಲ್ಲಿ 195.50 ರೂ. ಹೆಚ್ಚಳವಾಗಿದೆ. ಇದಕ್ಕೂ ಮೊದಲು ಮಾರ್ಚ್ 1ರಂದು 19 ಕೆ.ಜಿ. ಸಿಲಿಂಡರ್ ಬೆಲೆ 114.5 ರೂ. ಏರಿಕೆಯಾಗಿತ್ತು.
ಯುದ್ಧದ ಕಾರಣಕ್ಕೆ ಭಾರತಕ್ಕೆ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ LPG ಪೂರೈಕೆ ಬಹಳ ವ್ಯತ್ಯಾಸವಾಗಿ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನಡುವೆ, ಸಿಲಿಂಡರ್ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ತೈಲ ಬೆಲೆ ಸುಮಾರು ಶೇ. 50ರವರೆಗೆ ಏರಿಕೆಯಾಗಿದೆ. ಪ್ರತಿ ತಿಂಗಳ ಮೊದಲ ದಿನದಂದು ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ವಿನಿಮಯ ದರ ಆಧರಿಸಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು LPG ಮತ್ತು ATF ದರಗಳನ್ನು ಪರಿಷ್ಕರಿಸುತ್ತವೆ. ಅದೇ ರೀತಿ ಇಂದಿನಿಂದ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲೂ ಪರಿಷ್ಕರಣೆಯಾಗಿದೆ.
ಗೃಹ ಬಳಕೆಯ LPG ದರದಲ್ಲಿಲ್ಲ ಬದಲಾವಣೆ
ಮಾರ್ಚ್ 7ರಂದು 60 ರೂ. ಏರಿಕೆಯಾದ ನಂತರ, ಗೃಹ ಬಳಕೆಯ 14.2 ಕೆ.ಜಿ. ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸದ್ಯ ಹೆಚ್ಚಳವಾಗಿರೋದು ಕಮರ್ಷಿಯಲ್ ಸಿಲಿಂಡರ್‌ಗಳ ದರ ಮಾತ್ರವಾಗಿದೆ. ಫೆಬ್ರವರಿ 28ರಂದು ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಾಮೆನೇಯಿ ಸಾವಿನ ನಂತರ ಪರಿಸ್ಥಿತಿ ಗಂಭೀರಗೊಂಡಿದೆ. ಇದರ ಪರಿಣಾಮವಾಗಿ ಹೋರ್ಮುಜ್ ಸಮುದ್ರ ಮಾರ್ಗದ ಮೂಲಕ ಸಾಗುವ ಜಾಗತಿಕ ತೈಲ ಸಾಗಾಟಕ್ಕೂ ಅಡ್ಡಿಯಾಗಿದೆ. ಈ ಮಾರ್ಗದ ಮೂಲಕ ವಿಶ್ವದ ಸುಮಾರು ಐದನೇ ಭಾಗದ ತೈಲ ಸಾಗಾಟವಾಗುವುದರಿಂದ, ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ಬಿದ್ದಿದೆ.
For More Updates Join our WhatsApp Group :




