ಜಿಎಸ್‌ಟಿ ಹೆಸರಿನಲ್ಲಿ ಲಂಚ ಕೇಳಿದ ಡಿಸಿ ಭರತ್ ಹೆಗಡೆ.
ಹುಬ್ಬಳ್ಳಿ: ಕಮರ್ಷಿಯಲ್ ಟ್ಯಾಕ್ಸ್ ಅಡಿಟ್ ವಿಭಾಗದ ಡಿಸಿ ಭರತ್ ಹೆಗಡೆ ಜಿಎಸ್‌ಟಿ ಬಾಕಿ ಹೆಸರಿನಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ ಲೋಕಾ ಬಲೆಗೆ ಬಿದ್ದಿದ್ದಾರೆ. ಅವರ ಈ ಅವ್ಯವಹಾರದ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ದೂರು ನೀಡಿದ ಹಿನ್ನೆಲೆ ಕಾರ್ಯಾಚರಣೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಭರತ್ ಹೆಗಡೆಯನ್ನು ಟ್ರ್ಯಾಪ್ ಮಾಡಿದ್ದಾರೆ.
60 ಲಕ್ಷ ರೂ. ಹಣಕ್ಕೆ ಬೇಡಿಕೆ
ಕಮರ್ಷಿಯಲ್ ಟ್ಯಾಕ್ಸ್ ಅಡಿಟ್ ವಿಭಾಗದ ಡೆಪ್ಯುಟಿ ಕಮಿಷನರ್ (DC) ಆಗಿರುವ ಭರತ್ ಹೆಗಡೆ, ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ. ತೆರಿಗೆ ಪರಿಶೀಲನೆ (ಆಡಿಟ್), ಜಿಎಸ್‌ಟಿ ಸಂಬಂಧಿತ ಪ್ರಕರಣಗಳ ಪರಿಶೀಲನೆ ಹಾಗೂ ವ್ಯಾಪಾರಿಗಳ ತೆರಿಗೆ ಬಾಕಿ ವಿಚಾರಗಳನ್ನು ನೋಡಿಕೊಳ್ಳುವುದು ಇವರ ಜವಾಬ್ದಾರಿಯಾಗಿದೆ. ಆದರೆ ಇವರು, ವಿಶ್ವನಾಥ್ ನಾಯಕ್ ಎಂಬ ಪೆಟ್ರೋಲ್ ಬಂಕ್ ಮಾಲೀಕರಿಗೆ 60 ಲಕ್ಷ ರೂ.ಜಿಎಸ್‌ಟಿ ಹಣ ಕಟ್ಟಬೇಕು ಎಂದು ನೋಟಿಸ್ ನೀಡಿದ್ದಲ್ಲದೆ ಪ್ರಕರಣವನ್ನು ಸುಗಮಗೊಳಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಬೆಂಗಳೂರಿನಿಂದ ಬಂದ ಆರು ಅಧಿಕಾರಿಗಳ ತಂಡ
ಈ ಕುರಿತು ವಿಶ್ವನಾಥ್ ನಾಯಕ್ ಹುಬ್ಬಳ್ಳಿಯಿಂದ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೂಕ್ತ ಯೋಜನೆಯೊಂದಿಗೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದಾರೆ. ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬೆಂಗಳೂರಿನಿಂದ ಬಂದ ಆರು ಅಧಿಕಾರಿಗಳ ತಂಡ ಭರತ್ರನ್ನು ಬಲೆಗೆ ಬೀಳಿಸಿದೆ. ಮುಂಜಾನೆ ಸುಮಾರು 11:30ರ ವೇಳೆಗೆ ಹುಬ್ಬಳ್ಳಿ ನವನಗರದಲ್ಲಿರುವ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಭರತ್ ಹೆಗಡೆಯನ್ನು ಬಲೆಗೆ ಬೀಳಿಸಲಾಗಿದ್ದು, ಘಟನೆ ನಂತರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
For More Updates Join our WhatsApp Group :




