ಬೆಂಗಳೂರು: ಚನ್ನಪಟ್ಣಣ ನನ್ನ ಹೃದಯಲ್ಲಿದೆ. ಸಾತನೂರು ಚನ್ನಪಟ್ಟಣದ ಒಂದು ಭಾಗ. ನಾನು ಚನ್ನಪಟ್ಟಣವನ್ನು ಪ್ರೀತಿಸುತ್ತೇನೆ.ತಾಲೂಕಿನ ಅಭಿವೃದ್ದಿ ಮಾಡಬೇಕಿದೆ, ಅನಿವಾರ್ಯವಾದರೇ ಇಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ನನಗೆ ರಾಜಕೀಯವಾಗಿ ಜೀವಕೊಟ್ಟ ತಾಲ್ಲೂಕು ಚನ್ನಪಟ್ಟಣವಾಗಿದೆ. ನಾಲ್ಕು ಬಾರಿ ಹೋಬಳಿ ಮಟ್ಟದಲ್ಲಿ ಆಶೀರ್ವಾದ ಮಾಡಿದ್ರು. ಚನ್ನಪಟ್ಟಣ ಜನರ ಋಣ ತೀರಿಸಬೇಕು. ಆದರೆ, ಚನ್ನಪಟ್ಟಣದಿಂದ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ, ಆದರೆ ಅನಿವಾರ್ಯ ಬಂದರೆ ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುತ್ತೇನೆ.
ಈ ಬಗ್ಗೆ ಕ್ಷೇತ್ರದ ಮತದಾರರು ಹೇಳಿದಂತೆ ಕೇಳುತ್ತೇನೆ ಎಂದು ಶಿವಕುಮಾರ್ ವಿವರಿಸಿದರು. ಇವತ್ತು ಕ್ಷೇತ್ರದ ಎಲ್ಲಾ ದೇವಸ್ಥಾನಗಳಿಗೆ ಹೋಗುತ್ತಿದ್ದೇನೆ. ಆ ಮೇಲೆ ಮತದಾರರು, ನಾಯಕರ ಜೊತೆ ಮಾತಾಡುತ್ತೇನೆ. ಮತದಾರರು ನಾನೇ ನಿಲ್ಲಬೇಕು ಅಂದ್ರೆ ವಿಧಿಯಿಲ್ಲ. ನಮ್ಮ ಪಕ್ಷ, ಮತದಾರರು ಏನು ಹೇಳುತ್ತಾರೋ ಅದನ್ನು ಕೇಳಲೇಬೇಕು. ಅನಿವಾರ್ಯವಾದರೆ ಚನ್ನಪಟ್ಟಣದಿಂದಲೇ ಸ್ಪರ್ಧೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಸೋಲನ್ನು ಅನುಭವಿಸಿದ್ದ ಡಿಕೆ ಸುರೇಶ್ ಅವರು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ, ಇದೀಗ ದಿಢೀರ್ ಎಂಬಂತೆ ಡಿಕೆ ಶಿವಕುಮಾರ್ ಅವರೇ ಚನ್ನಪಟ್ಟಣದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ.