ನವದೆಹಲಿ : ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸಿದ್ದಾರೆ. ಭಾರತೀಯ ಸೇನೆ ಪಹಲ್ಗಾಮ್ ದಾಳಿಗೆ ಕಾರಣರಾದ ಉಗ್ರರನ್ನು ಹತ್ಯೆ ಮಾಡಿರುವುದು ಮೆಚ್ಚಲೇಬೇಕಾದ ಸಂಗತಿ. ಆದರೆ ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಿಯಾಂಕಾ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗುಪ್ತಚರ ವೈಫಲ್ಯವನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, “ಇಂತಹ ಭೀಕರ ಭಯೋತ್ಪಾದಕ ದಾಳಿ ನಡೆಯಲಿದೆ ಮತ್ತು ಪಾಕಿಸ್ತಾನದಲ್ಲಿ ಅದಕ್ಕೆ ಸಂಚು ರೂಪಿಸಲಾಗುತ್ತಿದೆ ಎಂದು ಯಾವುದೇ ಸರ್ಕಾರಿ ಸಂಸ್ಥೆಗೆ ತಿಳಿದಿರಲಿಲ್ಲವೇ?” ಎಂದು ಕೇಳಿದ್ದಾರೆ.
“ಜನರು ಈ ಸರ್ಕಾರವನ್ನು ನಂಬಿ ಪಹಲ್ಗಾಮ್ಗೆ ಹೋದರು. ಆದರೆ, ಸರ್ಕಾರ ಅವರನ್ನು ದೇವರ ದಯೆಗೆ ಬಿಟ್ಟಿತು. ಈ ಹಿಂದೆ ಡಾ. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ 26/11 ಮುಂಬೈ ದಾಳಿ ನಡೆದಾಗ ಎಲ್ಲಾ ಭಯೋತ್ಪಾದಕರು ಒಂದೇ ಸಮಯದಲ್ಲಿ ಕೊಲ್ಲಲ್ಪಟ್ಟರು. ಒಬ್ಬನನ್ನು ಹಿಡಿಯಲಾಯಿತು, ನಂತರ ಆತನನ್ನು ಗಲ್ಲಿಗೇರಿಸಲಾಯಿತು. ಆ ದಾಳಿಯ ಬಳಿಕ ನೈತಿಕ ಹೊಣೆ ಹೊತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ರಾಜೀನಾಮೆ ನೀಡಿದರು, ಗೃಹ ಸಚಿವರು ರಾಜೀನಾಮೆ ನೀಡಿದರು. ಏಕೆಂದರೆ ನಾವು ನಮ್ಮ ಜನರಿಗೆ ಮತ್ತು ನಮ್ಮ ಭೂಮಿಗೆ ಜವಾಬ್ದಾರರಾಗಿದ್ದೇವೆ ಎಂಬ ಕಾರಣಕ್ಕೆ. ಆದರೆ, ಪಹಲ್ಗಾಮ್ ದಾಳಿಗೆ ತಮ್ಮ ಭದ್ರತಾ ವೈಫಲ್ಯ ಕಾರಣ ಎಂದು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲೇ ಇಲ್ಲ” ಎಂದು ಅವರು ಹೇಳಿದ್ದಾರೆ.