ಬೆಂಗಳೂರು : ಮಾರಕಾಸ್ತ್ರಗಳಿಂದ ಕೊಚ್ಚಿ ಕಾಂಗ್ರೆಸ್ ಮುಖಂಡನೋರ್ವನ ಬರ್ಬರ ಹತ್ಯೆಗೈದಿರುವ ಘಟನೆ ಜಿಲ್ಲೆಯ ಬೆಂಗಳೂರು ದಕ್ಷಿಣ(ರಾಮನಗರ) ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಗ್ರಾಮದ ಡಾಬಾವೊಂದರ ಬಳಿ ನಡೆದಿದೆ. ಜಮೀನು ವಿವಾದ ಹಿನ್ನೆಲೆಯಲ್ಲಿ ನಾಲ್ಕೈದು ಜನರ ತಂಡ, ಡಾಬಾವೊಂದರಲ್ಲಿ ಪಾರ್ಟಿ ಮಾಡುತ್ತಿದ್ದ ನಂಜೇಶ್(45) ಎನ್ನುವರ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಸಿಕ್ಕ ಸಿಕ್ಕಲ್ಲಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರಿಂದ ತೀವ್ರ ರಕ್ತಸ್ರಾವದಿಂದ ಅಚ್ಚಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಂಜೇಶ್ ಸಾವನ್ನಪ್ಪಿದ್ದಾರೆ.

ಹೊಂಗಾಣಿದೊಡ್ಡಿ ಗ್ರಾಮದ ನಿವಾಸಿಯಾಗಿದ್ದ ನಂಜೇಶ್, ಕೆಲವು ದಿನಗಳ ಹಿಂದೆಯೇ ತನ್ನ ಗ್ರಾಮದಲ್ಲಿನ ಜಮೀನಿನ ಸೈಟ್ ವಿವಾದಕ್ಕೆ ಸಂಬಂಧಪಟ್ಟಂತೆ ಸ್ಥಳೀಯರೊಂದಿಗೆ ಮಾತಿನ ಚಕಮಕಿ ಮಾಡಿಕೊಂಡಿದ್ದ. ಈ ಸಂಬಂಧ ಒಂದು ಸುತ್ತಿನ ಜಗಳವೂ ನಡೆದಿತ್ತು. ಈ ಹಿನ್ನೆಲೆಯೇ ಹಳೆಯ ಘಟನೆಯ ಬಗ್ಗೆ ದ್ವೇಷವನ್ನು ಸಾಧಿಸುತ್ತಿದ್ದ ವಿರೋಧಿಗಳು ಕಾಂಗ್ರೆಸ್ ಮುಖಂಡ ನಂಜೇಶ್‌ನನ್ನು ಕೊಲೆ ಮಾಡುವುದಕ್ಕೆ ಸುಪಾರಿ ಕೊಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಸಾತನೂರಿಗೆ ಬಂದ ಈ ಅಪರಿಚಿತರ ಗ್ಯಾಂಗ್ ಮಾರಕಾಸ್ತ್ರಗಳಿಂದ ನಂಜೇಶನ ಮೇಲೆ ಮನಸೋ ಇಚ್ಛೆಯಾಗಿ ಮುಖ, ಮೂತಿಯನ್ನೂ ನೋಡದೇ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ನಂಜೇಶ್ ಅವರನ್ನು ತಕ್ಷಣವೇ ಕನಕಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆಯ ಬಳಿಕ ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಲಾಗಿದೆ.