ಅಕ್ರಮಗಳ ಪೈಪೋಟಿಯಲ್ಲಿ ಕಾಂಗ್ರೆಸ್ ಶಾಸಕರು!

ಅಕ್ರಮಗಳ ಪೈಪೋಟಿಯಲ್ಲಿ ಕಾಂಗ್ರೆಸ್ ಶಾಸಕರು!

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್, ಭ್ರಷ್ಟಾಚಾರ ಆರೋಪ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಗುತ್ತಿಗೆದಾರರು ಮತ್ತೆ ಮತ್ತೆ ಮಾಡುತ್ತಿರುವ ಆರೋಪಗಳಿಂದ ಮುಜುಗರಕ್ಕೀಡಾಗಿದೆ. ಮತ್ತೊಂದೆಡೆ, ಪಕ್ಷದ ಮೂರ್ನಾಲ್ಕು ಶಾಸಕರ ಮೇಲೆ ಅಕ್ರಮ, ಭ್ರಷ್ಟಾಚಾರ, ಕ್ರಿಮಿನಲ್ ಪ್ರಕರಣಗಳ ಆರೋಪಗಳು ಕೇಳಿಬಂದಿರುವುದು ಮತ್ತು ಆ ಕುರಿತ ತನಿಖೆ ಪ್ರಗತಿಯಲ್ಲಿರುವುದು ಆಡಳಿತಾರೂಢ ಕಾಂಗ್ರೆಸ್​​​ಗೆ ಇರಿಸುಮುರಿಸು ಉಂಟುಮಾಡಿದೆ.

ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಬಂಧನ ಆಗಿರುವುದು, ಶಾಸಕ ವೀರೇಂದ್ರ ಪಪ್ಪಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದು, ವಿನಯ್ ಕುಲಕರ್ಣಿ ವಿರುದ್ಧದ ಕೊಲೆ ಆರೋಪ, ಮತ ಎಣಿಕೆ ಅಕ್ರಮ ಆರೋಪದಲ್ಲಿ ನಂಜೇಗೌಡ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವುದು, ಇದೀಗ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯಕ್ತ ದಾಳಿ ನಡೆದಿರುವುದು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷ ಬಿಜೆಪಿಗೆ ಪ್ರಬಲ ಅಸ್ತ್ರ ದೊರೆಯುವಂತೆ ಮಾಡಿದೆ.

ವಿನಯ್ ಕುಲಕರ್ಣಿ: ಧಾರವಾಡ ಜಿಲ್ಲಾ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಅವರು ಜೈಲು ಪಾಲಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅವರು, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿದ್ದರು. 2025ರ ಜೂನ್​ನಲ್ಲಿ ಸುಪ್ರೀಂ ಕೋರ್ಟ್ ಅವರ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ನಂತರ ಮತ್ತೆ ಬಂಧನಕ್ಕೊಳಗಾಗಿದ್​ದರು.

ಸತೀಶ್ ಸೈಲ್: ಬೇಲೇಕೇರಿ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ನಿವಾಸ ಹಾಗೂ ಕಚೇರಿಗಳ ಮೇಲೆ ಆಗಸ್ಟ್​ನಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಹಣ ಹಾಗೂ ಚಿನ್ನವನ್ನು ಇಡಿ ವಶಪಡಿಸಿಕೊಂಡಿತ್ತು. ನಂತರ ಅವರನ್ನು ಸೆಪ್ಟೆಂಬರ್ 9 ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು. ಆ ಬಳಿಕ ಅವರು ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

ವೀರೇಂದ್ರ ಪಪ್ಪಿ: ಆನ್​ಲೈನ್ ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ನಿವಾಸ ಹಾಗೂ ಕಚೇರಿಗಳ ಮೇಲೆ ಆಗಸ್ಟ್ 22 ರಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದರು. ಇಡಿ ದಾಳಿ ವೇಳೆ ಕೋಟ್ಯಂತರ ರೂ ನಗದು ಸೇರಿ ವಿದೇಶಿ ಕರೆನ್ಸಿ ಪತ್ತೆಯಾಗಿತ್ತು. ಆ ಸಂದರ್ಭದಲ್ಲಿ ತಲೆಮರೆಸಿಕೊಂಡಿದ್ದ ವೀರೇಂದ್ರ ಪಪ್ಪಿಯನ್ನು ನಂತರ ಸಿಕ್ಕಿಂನಲ್ಲಿ ಬಂಧಿಸಲಾಗಿತ್ತು. ನಂತರ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಕೆವೈ ನಂಜೇಗೌಡ ಆಯ್ಕೆ: ಒಂದೆಡೆ ಕಾಂಗ್ರೆಸ್ ಪಕ್ಷವು ದೇಶ ಮಟ್ಟದಲ್ಲಿ ‘ವೋಟ್ ಚೋರಿ (ಮತ ಕಳ್ಳತನ)’ ಆರೋಪ ಮಾಡಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣಾ ಆಯೋಗದ ವಿರುದ್ಧ ಅಭಿಯಾನ ನಡೆಸುತ್ತಿದೆ. ಅಂಥದ್ದರಲ್ಲಿ, ಅದೇ ಕಾಂಗ್ರೆಸ್ ಪಕ್ಷದ, ಕೋಲಾರದ ಮಾಲೂರು ಕ್ಷೇತ್ರದ ಶಾಸಕ ಕೆವೈ ನಂಜೇಗೌಡ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದೆ. ಮತ ಎಣಿಕೆಯಲ್ಲಿ ನಿಯಮಗಳ ಪಾಲನೆ ಆಗಿಲ್ಲ ಎಂಬ ಆರೋಪದಲ್ಲಿ ಈ ಆದೇಶ ಬಂದಿದೆ. ಆದರೆ, ಆದೇಶ ಜಾರಿಗೆ ಒಂದು ತಿಂಗಳ ತಡೆ ನೀಡಿರುವ ಹೈಕೋರ್ಟ್, ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದೆ.

ಟಿಡಿ ರಾಜೇಗೌಡ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧ ಲೋಕಾಯುಕ್ತ ಪ್ರಕರಣ ದಾಖಲಿಸಿಕೊಂಡಿದ್ದು, ಶಾಸಕರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಬಾಳೆಹೊನ್ನೂರು ಸಮೀಪ ಹಲಸೂರಲ್ಲಿ ಉದ್ಯಮಿ, ದಿವಂಗತ ಸಿದ್ಧಾರ್ಥ್​ಗೆ ಸೇರಿದ್ದ 266 ಎಕರೆ ತೋಟವನ್ನು ರಾಜೇಗೌಡ ಖರೀದಿಸಿದ್ದರು. ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ, ಶಾಸಕರ ವಾರ್ಷಿಕ ಆದಾಯವೇ 38 ಲಕ್ಷ ರೂ. ಆಗಿದ್ದು, ನೂರಾರು ಕೋಟಿ ರೂ. ಬೆಲೆಬಾಳುವ ಭೂಮಿ ಖರೀದಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಸ್ಥಳೀಯ ಬಿಜೆಪಿ ನಾಯಕರೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಮೇರೆಗೆ ಈ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *