ಬೆಂಗಳೂರು: ಕಳೆದ ಮೂರು ವಾರಗಳಿಂದ ಬೆಂಗಳೂರಿನ ಉದ್ಯಾನವನಗಳಲ್ಲಿ ‘ಬೆಂಗಳೂರು ನಡಿಗೆ’ ಕಾರ್ಯಕ್ರಮ ನಡೆಸಿದ್ದ ಡಿಸಿಎಂ ಡಿಕೆ ಶಿವಕುಮಾರ್ , ಇದೀಗ ರಾಜಧಾನಿಯ ಶ್ವಾಸಕೋಶಗಳಂತಿರುವ ಪಾರ್ಕ್ಗಳ ಪುನಶ್ಚೇತನದ ಜೊತೆಗೆ ‘ಟ್ರೀ ಪಾರ್ಕ್’ಗಳನ್ನು ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಗಾರ್ಡನ್ ಸಿಟಿಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ವಾಹನಗಳಿಂದ ಆಗುತ್ತಿರುವ ವಾಯುಮಾಲಿನ್ಯ ನಿಯಂತ್ರಣದ ಜೊತೆಗೆ ದೇಶಿ ಮರಗಳನ್ನು ಉಳಿಸಿ ಬೆಳೆಸುವ ಬಗ್ಗೆ ಚಿಂತನೆ ನಡೆಸಿರುವ ಅವರು, ಬೆಂಗಳೂರಿನ ಏಳು ಕಡೆಗಳಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲು ಮುಂದಾಗಿದ್ದಾರೆ.
ಟ್ರೀ ಪಾರ್ಕ್ಗಳ ಮೂಲಕ ರಾಜಧಾನಿಯ ಜನರಿಗೆ ದೇಶಿ ಮರಗಳ್ನು ಪರಿಚಯಿಸುವ ಉದ್ದೇಶ ಕೂಡ ಈ ಯೋಜನೆ ಹಿಂದಿದೆ. ಅದರ ಜತೆಗೆ, ಟ್ರೀ ಪಾರ್ಕ್ಗಳಲ್ಲಿ ವಾಕಿಂಗ್ ಪಾತ್ ನಿರ್ಮಿಸಿ ಜನರಿಗೆ ವಾಯುವಿಹಾರಕ್ಕೆ ಅನುಕೂಲ ಮಾಡಿಕೊಡುವುದಕ್ಕೂ ಚಿಂತನೆ ನಡೆದಿದೆ. ಏಳು ಕಡೆಗಳಲ್ಲಿ ಟ್ರೀ ಪಾರ್ಕ್ ನಿರ್ಮಾಣಕ್ಕೆ ಜಾಗ ಗುರುತಿಸುವ ಭರವಸೆ ನೀಡಿರುವ ಡಿಸಿಎಂ, ಅರಣ್ಯ ಇಲಾಖೆಯ ಜೊತೆ ಚರ್ಚಿಸಿ ಎಲ್ಲೆಲ್ಲಿ ನಿರ್ಮಾಣ ಮಾಡಬಹುದು ಅನ್ನೋ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಪರಿಸರ ಪ್ರಿಯರು, ಪರಿಸರ ತಜ್ಞರಿಂದ ಸ್ವಾಗತ
ಟ್ರೀ ಪಾರ್ಕ್ ನಿರ್ಮಾಣದಿಂದ ಹಲವು ಲಾಭಗಳಾಗಲಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶಿ ಮರಗಳನ್ನು ಬೆಳೆಸುವುದರಿಂದ ಮರಗಳ ಸಂರಕ್ಷಣೆ ಜೊತೆಗೆ ರಾಜಧಾನಿಯ ವಾತಾವರಣ ಕೂಡ ಶುದ್ಧವಾಗಲಿದೆ ಎಂದು ಪರಿಸರತಜ್ಞ ಡಾ.ಕೇಶವಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಕೆಲವು ರಾಜ್ಯಗಳಲ್ಲಿ ಟ್ರೀ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಮರಗಳನ್ನು ರಕ್ಷಿಸುವುದರ ಜೊತೆಗೆ ಪರಿಸರದ ಸಂರಕ್ಷಣೆ ಮಾಡಲಾಗುತ್ತಿದೆ. ಕಾಮಗಾರಿಗಳು, ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಮರ ಗಿಡಗಳು ಮರೆಯಾಗುತ್ತಿರುವ ರಾಜಧಾನಿಯಲ್ಲಿ ಟ್ರೀ ಪಾರ್ಕ್ ನಿರ್ಮಾಣ ಆದರೆ ಹಲವಾರು ಪ್ರಯೋಜನಗಳಾಗಲಿವೆ.
For More Updates Join our WhatsApp Group :
