ರಾಜ್ಯಗಳಿಗೆ ಶೇ.41 ತೆರಿಗೆ ಹಂಚಿಕೆ ಮುಂದುವರಿಕೆ.

ರಾಜ್ಯಗಳಿಗೆ ಶೇ.41 ತೆರಿಗೆ ಹಂಚಿಕೆ ಮುಂದುವರಿಕೆ.

16ನೇ ಹಣಕಾಸು ಆಯೋಗದ ಶಿಫಾರಸುಗೆ ಕೇಂದ್ರ ಸರ್ಕಾರ ಒಪ್ಪಿಗೆ.

ನವದೆಹಲಿ: ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ಕ್ರಮದ ಬಗ್ಗೆ 16ನೇ ಹಣಕಾಸು ಆಯೋಗ ಮಾಡಿದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಒಪ್ಪಿದೆ. ಇದರೊಂದಿಗೆ, ರಾಜ್ಯಗಳಿಗೆ ಕೇಂದ್ರದ ಶೇ. 41ರಷ್ಟು ತೆರಿಗೆ ಹಂಚಿಕೆ ಆಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಮಾಹಿತಿಯನ್ನು ತಮ್ಮ ಬಜೆಟ್ ಭಾಷಣದಲ್ಲಿ ನೀಡಿದ್ದಾರೆ.

ಬಜೆಟ್​ಗೆ ಮುನ್ನ ಅವರು 16ನೇ ಹಣಕಾಸು ಆಯೋಗದ ವರದಿಯನ್ನು ಸಂಸತ್​ನಲ್ಲಿ ಪ್ರಸ್ತುಪಡಿಸಿದರು. ಈ ಆಯೋಗವು 2025ರ ನವೆಂಬರ್ 17ರಂದೇ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸಿತ್ತು. ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಹಂಚಿಕೆ ಮಾಡಬೇಕೆಂದು ಈ ವರದಿಯಲ್ಲಿ ಮಾಡಲಾಗಿರುವ ಶಿಫಾರಸನ್ನು ಸರ್ಕಾರ ಸ್ವೀಕರಿಸಿದೆ. ಆಯೋಗದ ಶಿಫಾರಸಿನಂತೆ 2026-27ರ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ ಬಿಡುಗಡೆ ಮಾಡುತ್ತೇನೆ. ಇದರಲ್ಲಿ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿಪತ್ತು ನಿರ್ವಹಣಾ ನಿಧಿಗಳಿಗೆ ನೀಡುವ ಹಣವೂ ಒಳಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಏನಿದು ಶೇ. 41 ತೆರಿಗೆ ಹಂಚಿಕೆ?

16ನೇ ಹಣಕಾಸು ಆಯೋಗ ಮಾಡುವ ಶಿಫಾರಸುಗಳು 2026ರಿಂದ 2031ರವರೆಗೂ ಚಾಲ್ತಿಯಲ್ಲಿರಲಿವೆ. ಅಂದರೆ, ಶೇ. 41ರ ಟ್ಯಾಕ್ಸ್ ಹಂಚಿಕೆ ಸೂತ್ರ ಇನ್ನು ಐದು ವರ್ಷ ಮುಂದುವರಿಯುತ್ತದೆ. ಹಿಂದಿನ 15ನೇ ಫೈನಾನ್ಸ್ ಕಮಿಷನ್ ಕೂಡ ಶೇ. 41 ಟ್ಯಾಕ್ಸ್ ಡೆವಲ್ಯೂಶನ್ ಸೂತ್ರವನ್ನೇ ಶಿಫಾರಸು ಮಾಡಿತ್ತು. 2020ರಿಂದಲೂ ಶೇ. 41 ತೆರಿಗೆ ಹಂಚಿಕೆ ಕ್ರಮ ಚಾಲನೆಯಲ್ಲಿದೆ. ಅದಕ್ಕೆ ಮುನ್ನ 14ನೇ ಹಣಕಾಸು ಆಯೋಗವು ಶೇ. 42 ಟ್ಯಾಕ್ಸ್ ಡೆವಲ್ಯೂಶನ್​ಗೆ ಶಿಫಾರಸು ಮಾಡಿತ್ತು.

ತೆರಿಗೆ ಹಂಚಿಕೆ ಸೂತ್ರದ ಪ್ರಕಾರ ಕೇಂದ್ರ ಸರ್ಕಾರಕ್ಕೆ ಸಿಗುವ ಎಲ್ಲಾ ಕೇಂದ್ರೀಯ ತೆರಿಗೆಗಳಲ್ಲಿ ಎಷ್ಟು ಪಾಲು ರಾಜ್ಯಗಳಿಗೆ ಹೋಗಬೇಕು ಎಂಬುದನ್ನು ಈ ಟ್ಯಾಕ್ಸ್ ಡೆವೊಲ್ಯೂಶನ್ ಫಾರ್ಮುಲಾ ನಿರ್ಧರಿಸುತ್ತದೆ.

ಜಿಎಸ್​ಟಿಯಲ್ಲಿ ಎಸ್​ಜಿಎಸ್​ಟಿ ಆಯಾ ರಾಜ್ಯಗಳಿಗೆ ಪೂರ್ಣವಾಗಿ ಹೋಗುತ್ತದೆ. ಐಜಿಎಸ್​ಟಿ, ವೈಯಕ್ತಿಕ ಆದಾಯ ತೆರಿಗೆ, ಕಂಪನಿಗಳ ಲಾಭದ ಮೇಲಿನ ಟ್ಯಾಕ್ಸ್, ಆಮದು ಸುಂಕ, ರಫ್ತು ಸುಂಕ ಇತ್ಯಾದಿ ತೆರಿಗೆಯಲ್ಲಿ ಕೇಂದ್ರ ಸರ್ಕಾರವು ಶೇ. 41ರಷ್ಟನ್ನು ರಾಜ್ಯಗಳಿಗೆ ಕೊಡುತ್ತೆ.

ಈ ಶೇ. 41 ತೆರಿಗೆಯನ್ನು ಯಾವ್ಯಾವ ರಾಜ್ಯಗಳಿಗೆ ಎಷ್ಟೆಷ್ಟು ಹಂಚಿಕೆ ಮಾಡಬೇಕು ಎಂಬುದಕ್ಕೆ ಒಂದಿಷ್ಟು ಮಾನದಂಡಗಳಿವೆ. ಜನಸಂಖ್ಯೆ, ಆದಾಯ ಅಂತರ ಇತ್ಯಾದಿ ಮಾನದಂಡಗಳ ಅನುಸಾರ ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡಲಾಗುತ್ತದೆ. ಈ ಕಾರಣಕ್ಕೆ ಹೆಚ್ಚಿನ ತೆರಿಗೆ ಸಂಗ್ರಹಿಸುವ ರಾಜ್ಯಗಳಿಗೆ ಕಡಿಮೆ ತೆರಿಗೆ ಹಂಚಿಕೆ ಮಾಡಲಾಗುವುದುಂಟು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *