ಗುತ್ತಿಗೆದಾರನ ಬಿಲ್ ಬಾಕಿ : ಜಿಲ್ಲಾಧಿಕಾರಿಗಳ ಕಾರು ಜಪ್ತಿ

ಬೆಳಗಾವಿ30 ವರ್ಷಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯ ಬ್ಯಾರೇಜ್​ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಲ್​ ಬಾಕಿ ಉಳಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ ಆದೇಶ ನೀಡಿದರೂ, ಪರಿಹಾರ ನೀಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಶುಕ್ರವಾರ (ನಿನ್ನೆ) ಜಿಲ್ಲಾಧಿಕಾರಿಗಳ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್​ ಅವರ ಕಾರು ಕಚೇರಿ ಮುಂಭಾಗದಲ್ಲಿದ್ದಾಗ ಅರ್ಜಿದಾರನ ಪರ ವಕೀಲ ಒ.ಬಿ.ಜೋಶಿ ಅವರು ಜಪ್ತಿ ಮಾಡಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಗುತ್ತಿಗೆದಾರನ್ಯಾಯಾಲಯದ ಮೊರೆ1992-93ರಲ್ಲಿ ಚಿಕ್ಕೋಡಿಯ ದೂಧ್​ಗಂಗಾ ನದಿಗೆ ಅಡ್ಡಲಾಗಿ ಗುತ್ತಿಗೆದಾರ ದಿ.ನಾರಾಯಣ ಗಣೇಶ ಕಾಮತ್​ ಎಂಬವರು ಬ್ಯಾರೆಜ್ ನಿರ್ಮಾಣ ಮಾಡಿದ್ದರು. ಈ ವೇಳೆ ಬ್ಯಾರೆಜ್ ನಿರ್ಮಾಣಕ್ಕೆ ಅಗತ್ಯ ಇರುವಷ್ಟು ಸಿಮೆಂಟ್ ಪೂರೈಕೆ ಮಾಡಲು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ವಿಳಂಬ ಮಾಡಿದ್ದರು. ಇದರಿಂದ ಗುತ್ತಿಗೆದಾರ ಕಾಮತ್​ ಅವರಿಗೆ ಬಹಳಷ್ಟು ಹಾನಿ ಆಗಿತ್ತು. ಅಲ್ಲದೇ, ಷರತ್ತುಬದ್ಧ ಗುತ್ತಿಗೆಯಲ್ಲಿ ಬಿಲ್‌ ಸಿಗದಿದ್ದಕ್ಕೆ ನೀರಾವರಿ ಇಲಾಖೆ ವಿರುದ್ಧ 1995ರಲ್ಲಿ ಗುತ್ತಿಗೆದಾರ ಕಾಮತ್​ ನ್ಯಾಯಾಲಯದ ಮೊರೆ ಹೋಗಿದ್ದರು

ಬೆಳಗಾವಿಯ ಪ್ರಥಮ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ, ಗುತ್ತಿಗೆದಾರನಿಗೆ ಪರಿಹಾರ ನೀಡುವಂತೆ ತೀರ್ಪು ನೀಡಿತ್ತು. ಬಳಿಕ ಈ ಆದೇಶದ ವಿರುದ್ಧ ಸಣ್ಣ ನೀರಾವರಿ ಇಲಾಖೆ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ನಂತರ ಪ್ರಕರಣ ಮತ್ತೆ ಕೆಳ ಹಂತದ ನ್ಯಾಯಾಲಯಕ್ಕೆ ಬಂದಾಗ, ಗುತ್ತಿಗೆದಾರ ಕಾಮತ್ ಅವರಿಗೆ 11-8-1995ರಿಂದ ಶೇ. 9ರಷ್ಟು ಬಡ್ಡಿ ಸಮೇತ 1.31 ಕೋಟಿ ರೂ. ಪರಿಹಾರ ನೀಡುವಂತೆ 2024ರ ಜುಲೈ 31ರಂದು ಆದೇಶ ನೀಡಿತ್ತು. ಮೂರನೇ ಬಾರಿಗೆ ಮತ್ತೆ ಇದೇ ವರ್ಷ ಎಪ್ರಿಲ್​​ನಲ್ಲಿ ನ್ಯಾಯಾಲಯವು ಈ ಮೊತ್ತದ ಶೇ. 50ರಷ್ಟು ಪರಿಹಾರವನ್ನು ಜೂನ್ 2ರೊಳಗೆ ಪಾವತಿ ಮಾಡುವಂತೆ ತೀರ್ಪು ನೀಡಿತ್ತು. ಈ ಆದೇಶಕ್ಕೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ.

ನೀರಾವರಿ ಇಲಾಖೆ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಅವರು ಕೂಡಲೇ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಈಗಲೂ ಸಂಬಂಧಿಸಿದ ಅಧಿಕಾರಿಗಳು ಪರಿಹಾರ ಪಾವತಿಸಲು ವಿಳಂಬ ಮಾಡಿದ್ದರಿಂದ ಜಿಲ್ಲಾಧಿಕಾರಿಗಳ ಕಾರು ಜಪ್ತಿ ಪಡಿಸಿಕೊಳ್ಳಲಾಗಿದೆ ಎಂದು ನ್ಯಾಯವಾದಿ ಒ.ಬಿ. ಜೋಶಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *