ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಅನುಮತಿ ಪಡೆಯಲು 63 ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ.
ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆ ಅಂಗಳದ ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳು, 462 ತಾತ್ಕಾಲಿಕ ಮೊಬೈಲ್ ಟ್ಯಾಂಕ್ಗಳ ವ್ಯವಸ್ಥೆಯನ್ನು ಪಾಲಿಕೆಯ ಎಲ್ಲಾ ವಾರ್ಡ್ಗಳಲ್ಲಿ ಮಾಡಲಾಗಿದೆ.
ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅದರ ಸಂಪೂರ್ಣ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ವೆಬ್ ಸೈಟ್ ಲಿಂಕ್ https://apps.bbmpgov.in/ganesh2024/ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಸಾವಿರಾರು ಮಣ್ಣಿನ ಗಣೇಶ ವಿತರಣೆ: ಬಾಂಧವ ಸಾಮಾಜಿಕ ಸೇವಾ ಸಂಸ್ಥೆ ವತಿಯಿಂದ ಎಲ್.ಐ.ಸಿ.ಕಾಲೋನಿ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಜೇಡಿ ಮಣ್ಣಿನ ಗಣೇಶ ವಿತರಣೆ ಕಾರ್ಯಕ್ರಮ ಗುರುವಾರ ನೆಡೆಯಿತು.
ಮಾಜಿ ಶಾಸಕಿ, ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆ ಸೌಮ್ಯರೆಡ್ಡಿ, ಆಡಳಿತ ಪಕ್ಷದ ಮಾಜಿ ನಾಯಕ ಮತ್ತು ಜಯನಗರ ಗ್ಯಾರೆಂಟಿ ಯೋಜನೆ ಆನುಷ್ಠಾನ ಸಮಿತಿ ಅಧ್ಯಕ್ಷ ಎನ್.ನಾಗರಾಜು ಈ ಸಂದರ್ಭದಲ್ಲಿ ಮಣ್ಣಿನ ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಎನ್.ನಾಗರಾಜು ಮಾತನಾಡಿ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾರ್ಗದರ್ಶನದಲ್ಲಿ ಬೈರಸಂದ್ರ ವಾರ್ಡ್ನಲ್ಲಿ 9 ವರ್ಷದಿಂದ ಕೆರೆಯಿಂದ ಜೇಡಿ ಮಣ್ಣಿನಿಂದ ತಯಾರಿಸಿದ ಗೌರಿ, ಗಣೇಶ ಮೂರ್ತಿಗಳನ್ನು ಬಾಂಧವ ಸಂಸ್ಥೆ ವತಿಯಿಂದ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಪರಿಸರ ಜಾಗೃತಿ ಅಭಿಯಾನದ ಜೊತೆಯಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಣೆ ಪ್ರಯುಕ್ತ ಸಾವಿರಾರು ಜೇಡಿ ಮಣ್ಣಿನ ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು.