ಯುಎ ಪ್ರಮಾಣಪತ್ರ ನೀಡಲು ಆದೇಶ.
ಸಂಕಷ್ಟದಲ್ಲಿದ್ದ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಈ ಸಿನಿಮಾಗೆ ತಕ್ಷಣವೇ ಸೆನ್ಸಾರ್ ಪತ್ರ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿದೆ. ಇದರಿಂದ ತಂಡಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ. ಸಿನಿಮಾನ ಯಾವಾಗ ರಿಲೀಸ್ ಮಾಡಬೇಕು ಎಂಬುದರ ಬಗ್ಗೆ ತಂಡ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಿನಿಮಾಗೆ ಸೆನ್ಸಾರ್ ಪತ್ರ ನೀಡದ ಬಗ್ಗೆ ಕೆವಿಎನ್ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆ ಮಾಡಿದರೂ ನಮಗೆ ಪ್ರಮಾಣಪತ್ರ ನೀಡಿಲ್ಲ ಎಂದು ನಿರ್ಮಾಣ ಸಂಸ್ಥೆ ಅಳಲು ತೋಡಿಕೊಂಡಿತ್ತು. ಸಿನಿಮಾಗೆ ದೊಡ್ಡ ಮೊತ್ತದ ಬಂಡವಾಳ ಹೂಡಿದ್ದಾಗಿಯೂ ಹೇಳಿಕೊಂಡಿತ್ತು. ಈಗ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಕೋರ್ಟ್ ಆದೇಶ ನೀಡಿದ್ದು, ‘ಯುಎ’ ಸೆನ್ಸಾರ್ ಪತ್ರ ನೀಡುವಂತೆ ಸೂಚಿಸಿದೆ.
ಡಿಸೆಂಬರ್ ತಿಂಗಳಲ್ಲೇ ಸೆನ್ಸಾರ್ ಮಂಡಳಿಗೆ ‘ಜನ ನಾಯಗನ್’ ಚಿತ್ರ ತೋರಿಸಲಾಯಿತು. ಇದನ್ನು ವೀಕ್ಷಿಸಿದ ಮಂಡಳಿಯವರು 27 ಕಡೆಗಳಲ್ಲಿ ಬದಲಾವಣೆ/ಕಟ್/ಮ್ಯೂಟ್ಗೆ ಸೂಚಿಸಿತ್ತು. ಈ ಚಿತ್ರಕ್ಕೆ ಯುಎ 16+ ಪ್ರಮಾಣಪತ್ರ ನೀಡಿತ್ತು. ಈ ಬದಲಾವಣೆಗಳ ಬಳಿಕವೂ ಸೆನ್ಸಾರ್ ಮಂಡಳಿಯ ಸದಸ್ಯರೊಬ್ಬರು ಚಿತ್ರವನ್ನು ರಿವ್ಯೂ ಕಮಿಟಿಗೆ ನಿರ್ದೇಶಿಸುವ ನಿರ್ಧಾರ ಮಾಡಿದರು. ಇದರಿಂದ ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿರಲಿಲ್ಲ.
ಸೆನ್ಸಾರ್ ಮಂಡಳಿಯವರು ಹೇಳಿದ ಬದಲಾವಣೆ ಮಾಡಿದ ಬಳಿಕವೂ ರಿವ್ಯೂ ಸಮಿತಿಗೆ ಚಿತ್ರವನ್ನು ಸಲ್ಲಿಕೆ ಮಾಡುವ ಅವಶ್ಯಕತೆ ಏನಿದೆ ಎಂಬ ಪ್ರಶ್ನೆ ಚಿತ್ರತಂಡದ್ದಾಗಿತ್ತು. ಈಗ ಕೋರ್ಟ್ನಲ್ಲಿ ಸಿನಿಮಾ ಪರವಾಗಿ ಆದೇಶ ಬಂದಿದೆ.
ಈ ವಾರ ‘ಜನ ನಾಯಗನ್’ ರಿಲೀಸ್ ಅನುಮಾನ ಎನ್ನಲಾಗುತ್ತಿದೆ. ಈಗಾಗಲೇ ತಮಿಳುನಾಡಿನಲ್ಲಿ ‘ಪರಾಶಕ್ತಿ’ ಚಿತ್ರ ತೆರೆಗೆ ಬರುತ್ತಿದೆ. ಜನವರಿ 10ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಥಿಯೇಟರ್ಗಳು ಹಂಚಿಕೆ ಆಗಿರುವುದರಿಂದ ಚಿತ್ರವು ಜನವರಿ 14ರಂದು ತೆರೆಗೆ ಬರುವ ಎಲ್ಲಾ ಸಾಧ್ಯತೆ ಇದೆ.
For More Updates Join our WhatsApp Group :




