ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 46 ರನ್ ಬಾರಿಸಿದ್ದ ಕೆಎಲ್ಆರ್ ಇದೀಗ ದ್ವಿತೀಯ ಇನಿಂಗ್ಸ್ನಲ್ಲಿ ಅಜೇಯ 87 ರನ್ಗಳಿಸಿದ್ದಾರೆ. ಈ ಎಂಬತ್ತೇಳು ರನ್ಗಳೊಂದಿಗೆ ರಾಹುಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಒಟ್ಟು 508* ರನ್ ಕಲೆಹಾಕಿದ್ದಾರೆ.
ಇದರೊಂದಿಗೆ ವಿದೇಶಿ ಟೆಸ್ಟ್ ಸರಣಿಯಲ್ಲಿ 500+ ರನ್ ಕಲೆಹಾಕಿದ ಭಾರತದ 2ನೇ ಆರಂಭಿಕ ದಾಂಡಿಗ ಎಂಬ ಹೆಗ್ಗಳಿಕೆ ಕೆಎಲ್ ರಾಹುಲ್ ಪಾಲಾಗಿದೆ. ಈ ಮೂಲಕ ಕಳೆದ 4 ದಶಕಗಳಲ್ಲಿ ಟೀಮ್ ಇಂಡಿಯಾದ ಯಾವುದೇ ಓಪನರ್ಗೆ ಸಾಧ್ಯವಾಗದೇ ಇರುವುದನ್ನು ಕನ್ನಡಿಗ ಮಾಡಿ ತೋರಿಸಿದ್ದಾರೆ.
ಅಂದರೆ ಭಾರತದ ಪರ ವಿದೇಶಿ ಟೆಸ್ಟ್ ಸರಣಿವೊಂದರಲ್ಲಿ 500+ ರನ್ ಕಲೆಹಾಕಿರುವುದು ಸುನಿಲ್ ಗವಾಸ್ಕರ್ ಮಾತ್ರ. 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 774 ರನ್ ಕಲೆಹಾಕಿ ಗವಾಸ್ಕರ್ ಐತಿಹಾಸಿಕ ಸಾಧನೆ ಮಾಡಿದ್ದರು. ಇನ್ನು 1979 ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 542 ರನ್ಗಳಿಸಿ ಮಿಂಚಿದ್ದರು. ಇದಾದ ಬಳಿಕ ಭಾರತದ ಯಾವುದೇ ಬ್ಯಾಟರ್ ವಿದೇಶಿ ಸರಣಿಯೊಂದರಲ್ಲಿ 500 ರನ್ಗಳ ಮೈಲುಗಲ್ಲು ಮುಟ್ಟಿರಲಿಲ್ಲ.
ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ 508* ರನ್ ಕಲೆಹಾಕುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ 46 ವರ್ಷಗಳಿಂದ ಭಾರತದ ಯಾವುದೇ ಓಪನರ್ಗಳಿಗೆ ಸಾಧ್ಯವಾಗದ ಮೈಲಿಗಲ್ಲೊಂದನ್ನು ದಾಟಲು ಕನ್ನಡಿಗ ಯಶಸ್ವಿಯಾಗಿದ್ದಾರೆ. ಈ ಯಶಸ್ಸಿನೊಂದಿಗೆ ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಸರಣಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಓಪನರ್ ಎಂಬ ದಾಖಲೆ ಬರೆಯುವ ನಿರೀಕ್ಷೆಯಿದೆ.
ಈ ದಾಖಲೆ ಬರೆಯಲು ಕೆಎಲ್ ರಾಹುಲ್ಗೆ ಇನ್ನು ಬೇಕಿರುವುದು ಕೇವಲ 45 ರನ್ಗಳು ಮಾತ್ರ. ಐದನೇ ದಿನದಾಟದಲ್ಲಿ ಕೆಎಲ್ಆರ್ ನಲ್ವತ್ತೈದು ರನ್ಗಳಿಸಿದರೆ 1979 ರಲ್ಲಿ ಇಂಗ್ಲೆಂಡ್ ವಿರುದ್ಧ ಸುನಿಲ್ ಗವಾಸ್ಕರ್ ಬರೆದಿದ್ದ 542 ರನ್ಗಳ ದಾಖಲೆಯನ್ನು ಅಳಿಸಿ ಹಾಕಿ ಕೆಎಲ್ ರಾಹುಲ್ ಆಂಗ್ಲರ ನಾಡಿನಲ್ಲಿ ಹೊಸ ಇತಿಹಾಸ ಬರೆಯಲಿದ್ದಾರೆ.