ನಕಾರಾತ್ಮಕ ಚಿಂತನೆ, ಪರಿವಾರ ವಾದಕ್ಕೆ ಸೋಲು – ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ನವದೆಹಲಿದೇಶದಲ್ಲಿ ನಕಾತರಾತ್ಮಕ ಚಿಂತನೆ, ಪರಿವಾರವಾದಕ್ಕೆ ಮತ್ತೆ ಸೋಲಾಗಿದೆ. ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಸಮಾಜವನ್ನು ವಿಘಟಿಸಲು ಯತ್ನಿಸುವ ಶಕ್ತಿಗಳನ್ನು ಜನರು ಹೊರದಬ್ಬಿದ್ದಾರೆ ಎಂಬುದಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯೇ ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ ಮಹಾಯುತಿ ಗೆದ್ದಿದೆ. ವಿಕಸಿತ ಭಾರತದ ಸಂಕಲ್ಪವು ಬೆಳಗಿದೆ. ಕಾಂಗ್ರೆಸ್​​ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಕಪಾಳಮೋಕ್ಷವಾಗಿದೆ ಎಂದು ಮೋದಿ ಹೇಳಿದರು. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು.

ಮಹಾರಾಷ್ಟ್ರದಲ್ಲಿ ಎಲ್ಲ ದಾಖಲೆಗಳನ್ನು ಎನ್​ಡಿಎ ಮೈತ್ರಿ ಮುರಿದಿದೆ. ಕಳೆದ 50 ವರ್ಷಗಳಲ್ಲಿಯೇ ರಾಜ್ಯದಲ್ಲಿ ದೊಡ್ಡ ಗೆಲುವು ಸಾಧಿಸಿದೆ. ಸತತ ಮೂರನೇ ಬಾರಿಗೆ ಜನರು ಬಿಜೆಪಿ ಮೈತ್ರಿಗೆ ಗೆಲುವು ನೀಡಿದ್ದಾರೆ. ಬಿಜೆಪಿಯು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಐತಿಹಾಸಿಕ ಗೆಲುವಾಗಿದೆ. ಇದು ಅಭಿವೃದ್ಧಿಗೆ ಜನರು ಹಾಕಿದ ಜೈಕಾರವಾಗಿದೆ ಎಂದು ಬಣ್ಣಿಸಿದರು.

ಕಡೆಗಳಲ್ಲೆಲ್ಲಾ ನಾವು ಸತತ ಗೆಲುವು ಸಾಧಿಸಿದ್ದೇವೆ?: ಗೋವಾ, ಗುಜರಾತ್​, ಛತ್ತೀಸ್​ಗಢ, ಹರಿಯಾಣ, ಮಧ್ಯಪ್ರದೇಶದಲ್ಲಿ ನಾವು ಈಗಾಗಲೇ ಸತತ ಮೂರು ಬಾರಿ ಗೆಲುವು ಸಾಧಿಸಿದ್ದೇವೆ. ಬಿಹಾರದಲ್ಲೂ ಎನ್​ಡಿಎ ಸರ್ಕಾರಕ್ಕೆ ಗೆಲುವು ಸಿಕ್ಕಿದೆ. ಕೇಂದ್ರದಲ್ಲೂ ಕೂಡ ಎನ್​ಡಿಎಗೆ ಸತತ ಮೂರನೇ ಬಾರಿಗೆ ನೀಡಿದ್ದೀರಿ ಎಂದು ಸ್ಮರಿಸಿದರು.

ಅಭೂತಪೂರ್ವ ಗೆಲುವು ನೀಡಿದ್ದಕ್ಕೆ ಮಹಾರಾಷ್ಟ್ರ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಭಿವೃದ್ಧಿಯನ್ನು ಮೆಚ್ಚಿ ಅವರು ಮೂರನೇ ಬಾರಿಗೆ ಅಧಿಕಾರ ನೀಡಿದ್ದಾರೆ. ಈ ಗೆಲುವು ವಿಕಸಿತ ಭಾರತಕ್ಕೆ ಬಲ ನೀಡಿದೆ ಎಂದರು.

ದೇಶದಲ್ಲಿ ಕಾಂಗ್ರೆಸ್​​ ಪಕ್ಷವು ಪರಾವಲಂಬಿ ಜೀವಿಯಾಗಿದೆ. ಇತರ ಪಕ್ಷಗಳ ಜೊತೆಗೂಡಿಯೇ ಅದು ಚುನಾವಣೆ ಎದುರಿಸುತ್ತಿದೆ. ಅದಕ್ಕೆ ಏಕಾಂಗಿಯಾಗಿ ಎದುರಿಸುವ ಶಕ್ತಿ ಇಲ್ಲ. ಆದರೂ, ಅದರ ಅಹಂಕಾರ ತಗ್ಗಿಲ್ಲ. ಆ ಪಕ್ಷವು ತಾನು ಮುಳುಗುವುದರ ಜೊತೆಗೆ ತನ್ನ ಮಿತ್ರ ಪಕ್ಷಗಳನ್ನೂ ಮುಳುಗಿಸುತ್ತಿದೆ. ಅದಕ್ಕೆ ಮಹಾರಾಷ್ಟ್ರ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *