ನವದೆಹಲಿ: 2 ದಿನಗಳಲ್ಲಿ ದೆಹಲಿ ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡಿ ನನ್ನ ಸ್ಥಾನದಿಂದ ಹೊರಬರುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಜಾಮೀನಿನಿಂದ ಹೊರ ಬಂದ ಕೇಜ್ರಿವಾಲ್ ಸಭೆಯೊಂದರಲ್ಲಿ ಮಾತನಾಡುತ್ತಾ, ನವೆಂಬರ್ನಲ್ಲಿ ಅವಧಿಗೆ ಮುಂಚಿತವಾಗಿ ದೆಹಲಿಯಲ್ಲಿ ಚುನಾವಣೆ ನಡೆಸಲು ಬಯಸುವುದಾಗಿ ಹೇಳಿದರು.
ಚುನಾವಣೆ ಮುಗಿಯುವವರೆಗೂ ಮತ್ತೊಬ್ಬ ಎಎಪಿ ನಾಯಕ ಮುಖ್ಯಮಂತ್ರಿಯಾಗಲಿದ್ದಾರೆ ಮತ್ತು ಹೊಸ ಸಿಎಂ ಬಗ್ಗೆ ಕೆಲವೇ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
“ನಾನು ಅಗ್ನಿ ಪರೀಕ್ಷೆಗೆ ಸಿದ್ಧನಾಗಿದ್ದೇನೆ. 2 ದಿನಗಳ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ದೆಹಲಿಯಲ್ಲಿ ಚುನಾವಣೆ ನಡೆಯಲು ಇನ್ನೂ ಹಲವಾರು ತಿಂಗಳುಗಳಿವೆ. ಆದರೆ ಜನರ ತೀರ್ಪು ಬರುವವರೆಗೂ ನಾನು ಸಿಎಂ ಹುದ್ದೆಯಿಂದ ದೂರವುಳಿಯಲಿದ್ದೇನೆ” ಎಂದು ತಿಳಿಸಿದ್ದಾರೆ
“2 ರಿಂದ 3 ದಿನಗಳ ನಂತರ ಸಭೆ ನಡೆಯಲಿದ್ದು, ಸಭೆಯಲ್ಲಿ ಹೊಸ ಸಿಎಂ ಹೆಸರನ್ನು ನಿರ್ಧರಿಸಲಾಗುವುದು. ನಾನು ಮತ್ತು ಮನೀಶ್ ಸಿಸೋಡಿಯಾ ‘ಜನತಾ ನ್ಯಾಯಾಲಯದ’ ಮೊರೆ ಹೋಗಲಿದ್ದೇವೆ. ನಮ್ಮ ಭವಿಷ್ಯ ಮತದಾರರಾದ ನಿಮ್ಮ ಕೈಯಲ್ಲಿದೆ. ನಾನು ಪ್ರಾಮಾಣಿಕನಾಗಿದ್ದರೆ ನನಗೆ ಮತ ಚಲಾಯಿಸಿ, ಇಲ್ಲವಾದರೆ ಬೇಡ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ. ಸರ್ಕಾರವು ಜೈಲಿನಿಂದ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದರೂ ಅದು ಸಾಧ್ಯ ಎಂಬುದನ್ನು ನಾನು ಸಾಬೀತುಪಡಿಸಿದ್ದೇನೆ.
ಪ್ರಧಾನಿಯವರು ಸುಳ್ಳು ಕೇಸಿನಲ್ಲಿ ನಿಮ್ಮನ್ನು ಜೈಲಿಗೆ ಹಾಕಿದರೆ ರಾಜೀನಾಮೆ ನೀಡಬೇಡಿ ಎಂದು ನಾನು ಈ ಸಂದರ್ಭದಲ್ಲಿ ಎಲ್ಲಾ ಬಿಜೆಪಿಯೇತರ ಪಕ್ಷಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ. ನಾವು ಯಾವುದೇ ಸಂದರ್ಭದಲ್ಲೂ ರಾಜೀನಾಮೆ ನೀಡಬಾರದು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಜೈಲಿನಿಂದ ಸರ್ಕಾರ ನಡೆಸಲು ಸಾಧ್ಯ. ಇದು ನಮ್ಮ ಅಧಿಕಾರದ ದುರಾಸೆ ಅಥವಾ ನಮಗೆ ಸಿಎಂ ಸ್ಥಾನದ ಪ್ರಾಮುಖ್ಯತೆಯ ವಿಚಾರ ಅಲ್ಲ. ನಮ್ಮ ಸಂವಿಧಾನ, ನಮ್ಮ ದೇಶ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಯ ವಿಚಾರ ಇಲ್ಲಿ ಮುಖ್ಯವಾಗಿದೆ” ಎಂದು ಕೇಜ್ರಿವಾಲ್ ತಿಳಿಸಿದರು.