ಜ.27ರಂದು ಬ್ಯಾಂಕ್ ಉದ್ಯೋಗಿಗಳ ರಾಷ್ಟ್ರವ್ಯಾಪಿ ಮುಷ್ಕರ.
ನವದೆಹಲಿ: ವಾರದ ಕಾರ್ಯದಿನಗಳನ್ನು ಐದಕ್ಕೆ ಮಿತಿಗೊಳಿಸಬೇಕೆಂದು ಆಗ್ರಹಿಸಿ ಬ್ಯಾಂಕ್ ಉದ್ಯೋಗಿಗಳು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳ ವಿವಿಧ ಒಕ್ಕೂಟಗಳ ವೇದಿಕೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ಜನವರಿ 27ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿರುವುದಾಗಿ ಘೋಷಿಸಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾಒಕ್ಕೂಟ (ಎಐಬಿಒಸಿ) ಈ ನಿರ್ಧಾರವನ್ನು ತಿಳಿಸಿ ಜನವರಿ 4ರಂದು ಸುತ್ತೋಲೆ ಹೊರಡಿಸಿದೆ.
ಬ್ಯಾಂಕುಗಳಲ್ಲಿ ಈಗ ಭಾನುವಾರದ ಜೊತೆಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರದ ರಜೆಗಳಿವೆ. ಆದರೆ, ವಾರದ ಅಷ್ಟೂ ಶನಿವಾರ ಮತ್ತು ಭಾನುವಾರಗಳು ವಾರದ ರಜೆಯಾಗಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳು ಮಾಡುತ್ತಿರುವ ಆಗ್ರಹವಾಗಿದೆ.
ಬಹಳ ದಿನಗಳಿಂದಲೂ ಈ ಬೇಡಿಕೆ ಇದೆ. 2024ರ ಮಾರ್ಚ್ನಲ್ಲಿ ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆ ಸಂಬಂಧ ಬ್ಯಾಂಕ್ ಉದ್ಯೋಗಿಗಳ ಯೂನಿಯನ್ಗಳು ಹಾಗೂ ಭಾರತೀಯ ಬ್ಯಾಂಕುಗಳ ಸಂಘಟನೆಯಾದ ಐಬಿಎ ನಡುವೆ ನಡೆದ ರಾಜಿಯ ವೇಳೆ ವಾರದ ರಜೆ ವಿಚಾರದ ಬಗ್ಗೆ ಸಮ್ಮತಿ ಕೊಡಲಾಗಿತ್ತು. ಆದರೆ, ಸರ್ಕಾರದಿಂದ ಇನ್ನೂ ಕೂಡ ತೀರ್ಮಾನ ಬಂದಿಲ್ಲ ಎನ್ನುವುದು ಬ್ಯಾಂಕ್ ಉದ್ಯೋಗಿಗಳ ಆಕ್ರೋಶವಾಗಿದೆ.
‘ಬ್ಯಾಂಕ್ ಯೂನಿಯನ್ಗಳ ಮನವಿಗೆ ಸರ್ಕಾರ ಕಿವಿಗೊಡದ ಹಿನ್ನೆಲೆಯಲ್ಲಿ 2026ರ ಜನವರಿ 27ರಂದು ಎಲ್ಲಾ ಬ್ಯಾಂಕುಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಡಲು ನಿರ್ಧರಿಸಲಾಗಿದೆ. ಈ ಮುಷ್ಕರವನ್ನು ಯಶಸ್ವಿಗೊಳಿಸಿ’ ಎಂದು ಸುತ್ತೋಲೆಯಲ್ಲಿ ಮನವಿ ಮಾಡಲಾಗಿದೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




