ಚಾಕು ಇರಿತ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ..!

ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲದಲ್ಲಿ ನಡೆದ ಜೋಡಿ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಸೋಲುವ ಭೀತಿಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಧೀರಜ್ ಮುನಿರಾಜು ಅವರ ವಿರುದ್ಧ ಅಪಪ್ರಚಾರಕ್ಕೆ ಇಳಿದಿದ್ದಾರೆ. ರಾಜಕೀಯ ಉದ್ದೇಶಕ್ಕೆ ಗಲಭೆ ನಡೆಸುತ್ತಿರುವ ಶಂಕೆ ಇದೆ. ಈ ಘಟನೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ಇಲ್ಲಿಗೆ ಕೈಬಿಡದೆ ತಪ್ಪಿತಸ್ಥರನ್ನು ಪತ್ತೆ ಮಾಡುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಜೋಡಿ ಕೊಲೆ ಆರೋಪಿಗಳಿಗೆ ಬಿಜೆಪಿ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಧೀರಜ್ ಮುನಿರಾಜು ಅವರ ಮನೆ ಸಮೀಪದಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿರುವುದು ಕಾಕತಾಳೀಯ. ಜೆಡಿಎಸ್ ಮತ್ತು ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.

ದೊಡ್ಡಬೆಳವಂಗಲದಲ್ಲಿ ನಡೆದ ಕ್ರೀಡಾಕೂಟದ ವೇಳೆ ಸಂಬಂಧ ಇರದ ವ್ಯಕ್ತಿಯೊಬ್ಬ ಕ್ರೀಡಾಂಗಣದಲ್ಲಿ ಕಾರು ನಿಲ್ಲಿಸಿ ಜಗಳ ತೆಗೆದರು. ಆ ವೇಳೆ ಮಾತಿನ ಚಕಮಕಿ ನಡೆದಿದ್ದು, ನಂತರ ಅದೇ ವ್ಯಕ್ತಿ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದ. ತಪ್ಪು ನಿನ್ನದೆ ಎಂದು ಪೊಲೀಸರು ಬೈದು ಕಳಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕರ ಸಹೋದರ ರಾಮಣ್ಣ ಅವರು ಆರೋಪಿ ಪರವಾಗಿ ದೂರು ದಾಖಲಿಸುವಂತೆ ಪೊಲೀಸರಿಗೆ ಧಮ್ಕಿ ಹಾಕಿದ್ದಾರೆ ಎಂದರು.

ಆರೋಪಿ ವಿನಯ್ ಪರವಾಗಿ ಪೊಲೀಸರಿಗೆ ಫೋನ್ ಮಾಡಿ ಹೇಳಿರುವುದರ ಹಿನ್ನೆಲೆ ಏನು, ಗಲಾಟೆ ಮಾಡಿರುವ ವ್ಯಕ್ತಿ ಜೊತೆಗಾರರನ್ನು ಕರೆತಂದು ಮಾರಕಾಸ್ತ್ರಗಳೊಂದಿಗೆ ದೊಡ್ಡಬೆಳವಂಗಲದ ಬಸ್ ನಿಲ್ದಾಣದಲ್ಲಿ ಇಬ್ಬರು ಅಮಾಯಕ ಯುವಕರನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ವತ್ಸಲ ಜಗನಾಥ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಮಕಿಟ್ಟಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ನಗರಸಭೆ ಸದಸ್ಯರಾದ ನಾಗರತ್ನಮ್ಮ ಕೃಷ್ಣಮೂರ್ತಿ, ಹಂಸಪ್ರಿಯ ದೇವರಾಜ್, ಬಂತಿ ವೆಂಕಟೇಶ್, ಮಧುರೆ ಹೋಬಳಿ ಬಿಜೆಪಿ ಅಧ್ಯಕ್ಷ ಅನಿಲ್, ಮುಖಂಡರಾದ ನಾಗೇಶ್, ಕೆ.ಎಚ್. ವೆಂಕಟರಾಜು, ಕೆ.ಬಿ.ಮುದ್ದಪ್ಪ, ಎನ್.ಕೆ.ರಮೇಶ್, ಕಾಂತರಾಜ್, ಮಂಜುನಾಥ್ ಇದ್ದರು.

ರಾಜಕೀಯ ಬೆರೆಸದಿರಿ: ಬಿಜೆಪಿ ಜಿಲ್ಲಾ ವಕ್ತಾರರಾದ ಪುಷ್ಪಾ ಶಿವಶಂಕರ್ ಮಾತನಾಡಿ, ತಾಲ್ಲೂಕಿನಲ್ಲಿ ಅಹಿತಕರ ಘಟನೆ ನಡೆದಾಗ ಪಕ್ಷಾತೀತವಾಗಿ ನೋವಲ್ಲಿರುವ ಕುಟುಂಬದವರ ಪರವಾಗಿ ನಿಲ್ಲಬೇಕಿದೆ. ಆದರೆ, ಈ ಘಟನೆಯನ್ನು ಅವರಿಗೆ ತೋಚಿದಂತೆ ಅವಹೇಳನಾಕಾರಿಯಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಿ ಬಾಯಿಗೆ ಬಂದಂತೆ ಮಾತಾಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಧೀರಜ್ ಮುನಿರಾಜು ಅವರ ಮೇಲೆ ಗೂಬೆ ಕೂರಿಸುವುದು ಶೋಭೆಯಲ್ಲ. ಕ್ರೀಡಾಕೋಟವನ್ನು ಸ್ಥಳೀಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಪ್ರಾಯೋಜಿಸಿತ್ತು. ಧೀರಜ್ ಸಹಕಾರ ನೀಡಿದ್ದರು. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಕಾಂಗ್ರೆಸ್ ಮುಖಂಡ ಜಿ.ಲಕ್ಷ್ಮೀಪತಿ ಅವರು ಬಿಜೆಪಿ ಮುಖಂಡರ ವಿರುದ್ಧ ಕೀಳುಮಟ್ಟದಲ್ಲಿ ಮಾತನಾಡಿರುವುದು ಶೋಭೆ ತರುವುದಿಲ್ಲ. ಘಟನೆಯನ್ನು ರಾಜಕಾರಣಕ್ಕೆ ತಿರುಗಿಸಿ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.

Pragati TV Social Connect for more latest u

Leave a Reply

Your email address will not be published. Required fields are marked *