ಗಗನಯಾನಕ್ಕೆ ಧಾರವಾಡದ ನೊಣಗಳು ಸಿದ್ಧ : ಹೊಸ ಅಧ್ಯಯನಕ್ಕೆ ಮುನ್ನುಡಿ

Dharwad's flies ready for spaceflight: Foreword to new study

ಧಾರವಾಡ : ಮುಂದಿನ‌ ವರ್ಷ ನಡೆಸುವ ಗಗನಯಾನಕ್ಕೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿನ ನೊಣಗಳು ಸಿದ್ಧವಾಗಿವೆ. ಇದರಿಂದ ಕೃಷಿ ವಿವಿ ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದೆ.

ಗಗನಯಾನ ನೌಕೆಯಲ್ಲಿ ನೊಣದ ಕಿಟ್ ಅಧ್ಯಯನಕ್ಕೆ ಹೋಗಲಿದೆ. ಕೃಷಿ ವಿಶ್ವವಿದ್ಯಾಲಯದ ಜೈವಿಕಶಾಸ್ತ್ರ ವಿಭಾಗದಿಂದ ನೊಣದ ಕಿಟ್ ತಯಾರಿಸಲಾಗಿದೆ. ವಿವಿಯ ವಿಜ್ಞಾನಿ ರವಿಕುಮಾರ್ ಹೊಸಮನಿ ಅವರು ಈ ರೀತಿಯ ವಿಶೇಷ ಪ್ರಯೋಗ ಮಾಡಿದ್ದಾರೆ. ದೇಶದ 75 ಕೃಷಿ ವಿವಿಗಳ ಪೈಕಿ ಧಾರವಾಡ ಕೃಷಿ ವಿವಿ ಆಯ್ಕೆಯಾಗಿದೆ.

2025ರಲ್ಲಿ ಇಸ್ರೋದಿಂದ ನಭಾಕ್ಕೆ ಗಗನಯಾನ ನೌಕೆ ಹೋಗಲಿದೆ. ನೌಕೆಯಲ್ಲಿ 15 ಹಣ್ಣಿನ ನೊಣಗಳಿರುವ ಕಿಟ್ ತೆರಳಲಿವೆ. ಬಾಹ್ಯಾಕಾಶದ ಶೂನ್ಯ ಗುರುತ್ವದಲ್ಲಿ 7 ದಿನ ಗಗನ ನೌಕೆ ಸುತ್ತಾಡಲಿದ್ದು, ಯಾನದಲ್ಲಿ ನೊಣಗಳಿಂದ ಕಿಟ್‌ ನಲ್ಲೇ ಸಂತಾನೋತ್ಪತ್ತಿ ಮಾಡಲಾಗುತ್ತದೆ. ಹಣ್ಣಿನ ನೊಣಕ್ಕೂ ಮನುಷ್ಯನ ದೇಹರಚನೆಗೂ ಹೋಲಿಕೆ ಇರುವ ಹಿನ್ನೆಲೆ ಬಾಹ್ಯಾಕಾಶದಲ್ಲಿ ನೊಣಗಳಲ್ಲಾಗುವ ಬದಲಾವಣೆ ಬಗ್ಗೆ ಈ ಅಧ್ಯಯನ ನಡೆಯಲಿದೆ.

ಬಾಹ್ಯಾಕಾಶದಲ್ಲಿ ಮನುಷ್ಯನ ಮೇಲೆ ಅತಿಯಾಗಿ ಕಾಡುವ ಕಿಡ್ನಿ ಸ್ಟೋನ್ ಸಮಸ್ಯೆ ಬಗೆಹರಿಸಲು ನೊಣಗಳ ಅಧ್ಯಯನ ಮಾಡಲಾಗುತ್ತದೆ. ಗಗನ ಯಾತ್ರಿಗಳು ಬಾಹ್ಯಾಕಾಶದಲ್ಲಿ ಇರುವಾಗ ಬಹಳಷ್ಟು ಜನರಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಎದುರಾಗುತ್ತದೆ.

ಅನ್ಯಗ್ರಹವಾಸದ ವೇಳೆ ಆಹಾರ ಪೂರೈಕೆ, ಸಂರಕ್ಷಣೆಗೆ ನೆರವು ನೀಡಲಿದ್ದು, ಇಸ್ರೋದೊಂದಿಗೆ ಕೃಷಿ ವಿವಿಯ ವಿಜ್ಞಾನಿಗಳು ಕೈಜೋಡಿಸಿದ್ದಾರೆ. ಮೊದಲ ಬಾರಿಗೆ ಗಗನಯಾನ ಅಧ್ಯಯನಕ್ಕೆ ಕೃಷಿ ವಿಜ್ಞಾನಿಗಳನ್ನ ಬಳಸಲಾಗುತ್ತಿದೆ. ಇದರಿಂದ ಕೃಷಿ ವಿವಿಯ ಹಿರಿಮೆ‌ ಹೆಚ್ಚಿಸಿದೆ. ಒಂದು ವೇಳೆ ಈ ಸಂಶೋಧನೆ ಯಶಸ್ವಿಯಾದರೆ ಮತ್ತೂಂದು ಮೈಲಿಗಲ್ಲು ಸ್ಥಾಪನೆಯಾಗಲಿದೆ. ಇಡೀ ವಿಶ್ವದಲ್ಲಿ ಯಾರೂ ಮಾಡಿರದ ಸಾಧನೆಗೆ ಕೃಷಿ ವಿವಿ ಮುಂದಾಗಿದೆ.

ಈ ಬಗ್ಗೆ ಕೃಷಿ ವಿವಿ ಕುಲಪತಿ ಡಾ. ಪಿ. ಎಲ್ ಪಾಟೀಲ್ ಅವರು ಮಾತನಾಡಿ, ‘2025ರಲ್ಲಿ ಗಗನಯಾನ ಯಾತ್ರೆಗೆ ಮನುಷ್ಯರನ್ನ ಕಳುಹಿಸುವ ಸಾಧ್ಯತೆ ಇದೆ. ಅದಕ್ಕಾಗಿ ಇಸ್ರೋದಿಂದ ಸಾಕಷ್ಟು ಪ್ರಯೋಗಗಳು ನಡೆದಿವೆ. ಗಗನಯಾತ್ರೆಗೆ ಮನುಷ್ಯರನ್ನ ಕಳುಹಿಸಿದಾಗ ಅಲ್ಲಿ ಕಿಡ್ನಿಯಲ್ಲಿ ಸ್ಟೋನ್ ಆಗುತ್ತವೆ ಎಂಬ ಸೂಚನೆ ಬಂದಿದೆ. ಅದಕ್ಕಾಗಿ ಮನುಷ್ಯನ ಕಿಡ್ನಿ ರಚನೆಯನ್ನು ಹೋಲುವ ನೊಣಗಳ ಲಾರ್ವೆಯನ್ನು ಅಲ್ಲಿಗೆ ಕಳುಹಿಸಲಾಗುತ್ತದೆ. ಅಲ್ಲಿ ಹೋದಾಗ ಸ್ಟೋನ್ ಆದಲ್ಲಿ ಯಾವ ರೀತಿಯ ಪರಿಣಾಮಗಳನ್ನು ಕಂಡುಕೊಳ್ಳಬೇಕು ಎಂಬುದರ ಕುರಿತ ಅಧ್ಯಯನ’ ಇದಾಗಿದೆ ಎಂದಿದ್ದಾರೆ.

ಕೃಷಿ ವಿವಿ ವಿಜ್ಞಾನಿ ರವಿಕುಮಾರ್ ಹೊಸಮನಿ ಅವರು ಮಾತನಾಡಿ, ‘ನೊಣಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಅಲ್ಲಿ ಕಿಡ್ನಿ ಸ್ಟೋನ್ ರಚನೆಯನ್ನು ನೋಡುತ್ತಿದ್ದೇವೆ. ಗಗನಯಾನಿಗಳಿಗೆ ಸ್ಟೋನ್ ಸಮಸ್ಯೆ ಕಂಡುಬರುತ್ತಿದೆ. ಹೀಗಾಗಿ ಇವುಗಳಿಂದ ನಾವು ಅರ್ಥ ಮಾಡಿಕೊಳ್ಳಬಹುದು’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *