‘ಧುರಂಧರ್ 2’ ಬಗ್ಗೆ ಶಾರುಖ್ ಖಾನ್ ಮೌನ.
ಬಾಲಿವುಡ್ ಅಂಗಳದಲ್ಲಿ ಈಗ ಎಲ್ಲಿ ನೋಡಿದರೂ ನಟ ರಣವೀರ್ ಸಿಂಗ್ ಅವರದ್ದೇ ಹವಾ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರದ ಭರ್ಜರಿ ಯಶಸ್ಸಿನಿಂದ ರಣವೀರ್ ಸಿಂಗ್ ಅವರು ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ಆದರೆ, ಈ ಯಶಸ್ಸಿನ ನಡುವೆಯೂ ಒಂದು ಸಣ್ಣ ಅಸಮಾಧಾನ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಅದೇನೆಂದರೆ, ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರು ರಣವೀರ್ ಅವರ ಈ ದೊಡ್ಡ ಸಾಧನೆಯ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂಬುದು. ಈಗ ಆ ಎಲ್ಲಾ ಪ್ರಶ್ನೆಗಳಿಗೆ ಮತ್ತು ಅಭಿಮಾನಿಗಳ ವದಂತಿಗಳಿಗೆ ಒಂದು ಫೋಟೋ ಉತ್ತರ ನೀಡಿದೆ.
ಇತ್ತೀಚೆಗೆ ಖ್ಯಾತ ಉದ್ಯಮಿ ಮೋಹಿತ್ ಕಾಂಬೋಜ್ ಅವರ ಪುತ್ರಿ ಮಿಷ್ಕಾ ಕಾಂಬೋಜ್ ಅವರ ಅದ್ದೂರಿ ಹುಟ್ಟುಹಬ್ಬದ ಪಾರ್ಟಿ ಮುಂಬೈನಲ್ಲಿ ನಡೆಯಿತು. ಈ ಸಂಭ್ರಮಕ್ಕೆ ಸಂಜಯ್ ದತ್, ರಣವೀರ್ ಸಿಂಗ್, ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ನ ಘಟಾನುಘಟಿಗಳು ಹಾಜರಾಗಿದ್ದರು. ಈ ಪಾರ್ಟಿಯ ಹಲವು ವಿಡಿಯೋ ಮತ್ತು ಫೋಟೋಗಳು ಈಗ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸದ್ಯ ಇಂಟರ್ನೆಟ್ನಲ್ಲಿ ಸಖತ್ ಸದ್ದು ಮಾಡುತ್ತಿರುವುದು ಶಾರುಖ್ ಖಾನ್ ಮತ್ತು ರಣವೀರ್ ಸಿಂಗ್ ಒಟ್ಟಿಗೆ ಇರುವ ಫೋಟೋ. ಈ ಫೋಟೋದಲ್ಲಿ ಇಬ್ಬರೂ ನಟರು ನಗುಮೊಗದಿಂದ ಪೋಸ್ ನೀಡಿದ್ದು, ಅವರ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು, ‘ಇಬ್ಬರ ನಡುವೆ ಯಾವುದೇ ಅಸಮಾಧಾನವಿಲ್ಲ. ಕಿಂಗ್ ಖಾನ್ ಯಾವಾಗಲೂ ರಣವೀರ್ ಅವರನ್ನು ಬೆಂಬಲಿಸುತ್ತಾರೆ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
‘ಧುರಂಧರ್ 2’ ಚಿತ್ರವು ವಿಶ್ವಾದ್ಯಂತ 1300 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದನ್ನು ಬಿಜೆಪಿ ಪರವಾದ ಪ್ರೊಪಗಾಂಡ ಸಿನಿಮಾ ಎಂದು ಟೀಕಿಸಿದ್ದಾರೆ. ಆದರೆ ರಿಷಬ್ ಶೆಟ್ಟಿ, ರಜನಿಕಾಂತ್, ಶಿವರಾಜ್ಕುಮಾರ್ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರವನ್ನು ಹೊಗಳಿದ್ದಾರೆ.
For More Updates Join our WhatsApp Group :



