ಇಡೀ ಜಗತ್ತಿನಲ್ಲಿ ಕಾಯಿಲೆಯಿಂದಾಗಿ ಅತೀ ಹೆಚ್ಚು ಮಂದಿ ಮೃತಪಡುತ್ತಿದ್ದರೆ ಅದು ಕ್ಯಾನ್ಸರ್ನಿಂದಾಗಿ. ಅಮೆರಿಕದಲ್ಲಿ ಕ್ಯಾನ್ಸರ್ ಪೀಡಿತರ ಪ್ರಮಾಣ ಅತ್ಯಧಿಕವಾಗಿದೆ. ಹಾಗೆ ಅಲ್ಲಿನ ಪರಿಸರವು ಇದಕ್ಕೆ ಪೂರಕವಾಗಿದೆ. ಇದನ್ನು ಹೊರತುಪಡಿಸಿ ಇಂಗ್ಲೆಂಡ್, ಭಾರತದಲ್ಲೂ ಸಹ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗಿಯೇ ಇದೆ.
ಕ್ಯಾನ್ಸರ್ನ ಅನೇಕ ಪ್ರಕಾರಗಳಿಂದ ಜನ ಇಂದು ನರಳುತ್ತಿದ್ದಾರೆ. ಕೆಲವರು ಆರಂಭದಲ್ಲೇ ಪತ್ತೆ ಮಾಡಿ ಚಿಕಿತ್ಸೆಗೆ ಒಳಗಾಗಿದ್ದರೆ ಮತ್ತೆ ಕೆಲವರು ಕ್ಯಾನ್ಸರ್ ಕೊನೆಯ ಹಂತ ತಲುಪಿದಾಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುತ್ತಾರೆ. ಕ್ಯಾನ್ಸರ್ನಲ್ಲಿ ಹತ್ತು ಹಲವು ವಿಧವಿದ್ದರೂ ಎಲ್ಲದಕ್ಕೂ ಒಂದೇ ರೀತಿಯ ಚಿಕಿತ್ಸಾ ಕ್ರಮ ನೋಡಹುದು. ಅದ್ರಲ್ಲೂ ಇತ್ತೀಚಿಗೆ ಯುವ ಜನತೆ ಕ್ಯಾನ್ಸರ್ಗೆ ತುತ್ತಾಗುತ್ತಿರುವುದು ಮತ್ತೊಂದು ಆತಂಕಕ್ಕೆ ಕಾರಣ.
ನೀವು ತುಟಿ ಕ್ಯಾನ್ಸರ್ನ ಬಗ್ಗೆ ಕೇಳಿದ್ದೀರಾ? ಬಹುಪಾಲು ಮಂದಿ ಈ ಕುರಿತು ಕೇಳಿರುವುದಿಲ್ಲ. ನಿಮ್ಮ ತುಟಿಗಳ ಮೇಲೆ ಕ್ಯಾನ್ಸರ್ ಕೋಶಗಳು ಬೆಳೆಯಲು ಆರಂಭಿಸುವ ಒಂದು ಪ್ರಕಾರವಾಗಿದೆ. ಆದರೆ ಈ ಪ್ರಕಾರವು ಆರಂಭಿಕ ಹಂತದಲ್ಲೇ ತಿಳಿದುಬರುವುದರಿಂದ ಚಿಕಿತ್ಸೆಯೂ ಸುಲಭವಾಗುತ್ತದೆ. ಅಮೆರಿಕದಲ್ಲಿ ಒಟ್ಟು ಕ್ಯಾನ್ಸರ್ ಪೀಡಿತರಲ್ಲಿ ಶೇ.0.6ರಷ್ಟು ಮಂದಿ ಈ ತುಟಿಗಳ ಕ್ಯಾನ್ಸರ್ ಹೊಂದಿದ್ದಾರೆ. ಇನ್ನು ಇಡೀ ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 40 ಸಾವಿರ ಮಂದಿ ಈ ಕಾಯಿಲೆಯಿಂದ ಬಳಲುತ್ತಾರೆ ಎಂದು ವರದಿಯಾಗಿದೆ.
ತುಟಿ ಕ್ಯಾನ್ಸರ್ ಗುರುತಿಸೋದು ಹೇಗೆ?
ಆರಂಭಿಕ ಹಂತದಲ್ಲಿ ತುಟಿಯ ಕ್ಯಾನ್ಸರ್ ಅನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗದಿರಬಹುದು. ಮೇಲ್ನೋಟಕ್ಕೆ ಇದು ಬಾಯಿಯ ಹುಣ್ಣಿನಂತೆ ಕಂಡುಬರುತ್ತದೆ. ತುಟಿಯ ಮೇಲೆ ಹುಣ್ಣು ಉಂಟಾಗುತ್ತದೆ. ಇದು ವಾಸಿಯಾಗುವುದೇ ಇಲ್ಲ. ಆದರೆ ಈ ಹುಣ್ಣು ಬಹುಬೇಗ ಹರಡಲು ಆರಂಭಿಸುತ್ತದೆ. ಕ್ಯಾನ್ಸರ್ ಕಾರಕ ಕೋಶಗಳು ಬೆಳೆಯುತ್ತದೆ. ತುಟಿ ಮೇಲಿನ ಗಾಯಗಳು ಹರಡಲು ಆರಂಭಿಸಿದಾಗಲೇ ಇದು ಕ್ಯಾನ್ಸರ್ ಎಂದು ತಿಳಿಯುವುದು ಸುಲಭವಾಗುತ್ತದೆ.
ತುಟಿ ಕ್ಯಾನ್ಸರ್ನ ಪ್ರಗತಿಯು ಗೆಡ್ಡೆಯ ಸ್ಥಳ ಮತ್ತು ನೀವು ಚಿಕಿತ್ಸೆಯನ್ನು ಪ್ರಾರಂಭಿಸಿದಾಗ ಅದು ಯಾವ ಹಂತದಲ್ಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ತುಟಿ ಕ್ಯಾನ್ಸರ್ಗೆ ಪ್ರಾಥಮಿಕ ಗೆಡ್ಡೆಗೆ ಚಿಕಿತ್ಸೆ ನೀಡಿದ ನಂತರವೂ ಸ್ಥಳೀಯವಾಗಿ, ಪ್ರಾದೇಶಿಕವಾಗಿ ಅಥವಾ ದೂರದ ರಚನೆಗಳಿಗೆ ಹರಡಲು ಸರಾಸರಿ 10-12 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.
ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಈ ತುಟಿ ಕ್ಯಾನ್ಸರ್ ಹಂತ ಹಂತವಾಗಿ ದೇಹದ ವಿವಿಧ ಭಾಗಗಳಿಗೆ ಹರಡಲು ಆರಂಭಿಸುತ್ತದೆ. ಬಾಯಿ, ದವಡೆ, ಗಂಟಲು, ಶ್ವಾಸಕೋಶ ಸೇರಿ ವಿವಿಧ ಅಂಗಕ್ಕೆ ಕೋಶಗಳು ಹಾನಿ ಮಾಡಲು ಆರಂಭಿಸುತ್ತದೆ.
ತುಟಿ ಕ್ಯಾನ್ಸರ್ನ ರೋಗಲಕ್ಷಣಗಳು
ಈ ಕ್ಯಾನ್ಸರ್ನ ಪ್ರಮುಖ ಲಕ್ಷಣವೆಂದರೆ ತುಟಿಯ ಮೇಲೆ ಕೆಂಪು ಬಣ್ಣದಿಂದ ಕೂಡಿದ ಹುಣ್ಣು ಕಾಣಿಸಿಕೊಳ್ಳುತ್ತದೆ. ಗಾಯವಾಗಿರುವ ಸ್ಥಳವು ಗಟ್ಟಿಯಾಗಿ ಕೈಗೆ ಸಿಗುತ್ತಿರುತ್ತದೆ. ತೀವ್ರ ನೋಉ, ಉರಿ ಹಾಗೂ ಕೆಲವೊಮ್ಮೆ ರಕ್ತಸ್ರಾವವಾಗುತ್ತಿರುತ್ತದೆ. ದಿನಕಳೆದಂತೆ ಈ ಗಾಯ ದೊಡ್ಡದಾಗುವುದು, ದವಡೆ ಊದಿಕೊಳ್ಳುವುದು, ಗಂಟಲು ನೋವು, ತುಟಿಯಲ್ಲಿ ಗುಳ್ಳೆ ಉಂಟಾಗಬಹುದು.
ತುಟಿ ಕ್ಯಾನ್ಸರ್ ಕಾಣಿಸಿಕೊಳ್ಳುವುದು ಏಕೆ?
ತುಟಿ ಕ್ಯಾನ್ಸರ್ ಕಾಣಿಸಿಕೊಳ್ಳಲು ನಿಗದಿತ ಕಾರಣಗಳಿಲ್ಲ. ಬದಲಿಗೆ ಹೆಚ್ಚು ಧೂಮಪಾನಿಗಳು, ಮದ್ಯಪಾನಿಗಳಲ್ಲಿ ಈ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಹೆಚ್ಚು. ಅದ್ರಲ್ಲೂ ಗುಟ್ಕಾ, ತಂಬಾಕು ಬಳಕೆ ಮಾಡುವವರಲ್ಲಿ ಇದು ಅಪಾಯಕಾರಿಯಾಗಿ ಬೆಳವಣಿಗೆ ಹೊಂದಲಿದೆ. ಮಾನವ ಪ್ಯಾಪಿಲೋಮವೈರಸ್ ಅಥವಾ HPV ಹೊಂದಿರುವವರು, ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವವರಲ್ಲಿ ಈ ರೀತಿಯ ಕ್ಯಾನ್ಸರ್ ಕಂಡುಬರುವ ಸಾಧ್ಯತೆ ಹೆಚ್ಚು.