ಬೆಂಗಳೂರು: ರಾಜ್ಯ ಸರ್ಕಾರವು 2025 ರೊಳಗೆ ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು 10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ ಮತ್ತು ವರ್ಧಿತ ರಿಯಾಲಿಟಿ, ವರ್ಚುವಲ್ ರಿಯಾಲಿಟಿ(AR-VR) ತರಬೇತಿ ನೀಡಲು ಮೆಟಾ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
‘ಡಿಜಿಟಲ್ ನಾಗರೀಕ್ ‘ ಮತ್ತು ‘ಎಆರ್-ವಿಆರ್ ಕೌಶಲ್ಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮೆಟಾ ಕಂಪೆನಿ ಜೊತೆಗೂಡಿ 10 ಲಕ್ಷ ಮಕ್ಕಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇಂತಹ ಉಪಕ್ರಮದಲ್ಲಿ ಮೆಟಾದೊಂದಿಗೆ ಸಹಕರಿಸುತ್ತಿರುವ ಭಾರತದ ಮೊದಲ ರಾಜ್ಯ ಕರ್ನಾಟಕವಾಗಿದೆ. ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ಮತ್ತು ಆನ್ಲೈನ್ ಸುರಕ್ಷತೆಯನ್ನು ಉತ್ತೇಜಿಸಲು ಎರಡು ವರ್ಷಗಳ ಪಾಲುದಾರಿಕೆಗೆ ನವೆಂಬರ್ 2023 ರಲ್ಲಿ ಸಹಿ ಹಾಕಲಾಗಿದೆ. ಈ ಕಾರ್ಯಕ್ರಮವು 18 ರಿಂದ 24 ವರ್ಷ ವಯಸ್ಸಿನ ಶಾಲಾ ಮತ್ತು ಪಿಯು ವಿದ್ಯಾರ್ಥಿಗಳಿಗೆ ಡಿಜಿಟಲ್ ಜಾಗೃತಿ ತರಬೇತಿಯನ್ನು ನೀಡುತ್ತದೆ ಎಂದರು.
ಈ ಉಪಕ್ರಮವು ರಾಜ್ಯದಾದ್ಯಂತ 100 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಒಳಗೊಳ್ಳುತ್ತದೆ. ತರಬೇತಿಯು ಡಿಜಿಟಲ್ ಸುರಕ್ಷತೆ ಮತ್ತು ಅರಿವಿನ ಮೇಲೆ ಕೇಂದ್ರೀಕರಿಸುತ್ತದೆ. ಮೊದಲ ಹಂತದಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ಮತ್ತು ದಕ್ಷಿಣ ಕನ್ನಡದಲ್ಲಿ ತರಬೇತಿ ನೀಡಲಾಗುವುದು. ಉಳಿದ ಜಿಲ್ಲೆಗಳನ್ನು ಮುಂದಿನ ಹಂತದಲ್ಲಿ ಸೇರಿಸಲಾಗುವುದು ಎಂದರು