ಒಂದೇ ಒಂದು ಹಿಟ್ ಸಿನಿಮಾ ಸಾಕು ಸಾಮಾನ್ಯ ನಟ ಅಥವಾ ನಿರ್ದೇಶಕ ಸ್ಟಾರ್ ಆಗಿಬಿಡಲು. ಒಂದು ಸಿನಿಮಾ ಹಿಟ್ ಆದ ಕೂಡಲೇ ಅಂಥಹವರ ಹಿಂದೆ ನಿರ್ಮಾಪಕರುಗಳು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ ಸಿನಿಮಾದ ಯಶಸ್ಸಿನ ಅಮಲು ತಲೆಗೆ ಏರಿದವರು ಎಲ್ಲರಿಗಿಂತಲೂ ತಾವೇ ದೊಡ್ಡವರು ಎಂದು ಮೆರೆಯಲು ಆರಂಭಿಸಿ, ವೃತ್ತಿಪರತೆಯನ್ನು ಮರೆಯುತ್ತಾರೆ, ಆಗಲೇ ಶುರು ಆಗುವುದು ನಿರ್ಮಾಪಕರುಗಳಿಗೆ ಸಂಕಷ್ಟ. ಈಗ ತೆಲುಗಿನಲ್ಲಿ ಇದೇ ಆಗಿದೆ. ಹೊಂಬಾಳೆ ಸೇರಿದಂತೆ ಇನ್ನೂ ಕೆಲವು ನಿರ್ಮಾಣ ಸಂಸ್ಥೆಗಳು ನಿರ್ದೇಶಕನೊಬ್ಬನಿಂದ ಇಕ್ಕಟ್ಟಿಗೆ ಸಿಲುಕಿವೆ.
‘ಹನು-ಮ್ಯಾನ್’ ಸಿನಿಮಾ ನಿರ್ದೇಶನ ಮಾಡಿರುವ ಪ್ರಶಾಂತ್ ವರ್ಮಾ ಬಗ್ಗೆ ಈಗ ತೆಲುಗು ಚಿತ್ರರಂಗದ ಕೆಲ ದೊಡ್ಡ ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಹನುಮ್ಯಾನ್’ ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೆ ಕೆಲವಾರು ನಿರ್ಮಾಪಕರು ಪ್ರಶಾಂತ್ ವರ್ಮಾಗೆ ಆತ ಕೇಳಿದಷ್ಟು ಮುಂಗಡ ಸಂಭಾವನೆ ಕೊಟ್ಟು ಸಿನಿಮಾ ನಿರ್ದೇಶಿಸಿಕೊಡುವಂತೆ ಕೇಳಿದರು. ಅದರಲ್ಲಿ ಹೊಂಬಾಳೆಯೂ ಒಂದು. ಆದರೆ ಈಗ ಪ್ರಶಾಂತ್ ವರ್ಮಾ ವೃತ್ತಿಪರತೆ ಮರೆತು ವರ್ತಿಸುತ್ತಿದ್ದಾನೆ ಎನ್ನಲಾಗುತ್ತಿದೆ.
ಹೊಂಬಾಳೆ, ಡಿವಿವಿ ಹಾಗೂ ಇನ್ನೂ ಕೆಲ ನಿರ್ಮಾಣ ಸಂಸ್ಥೆಗಳಿಗೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆದು ಆ ಹಣವನ್ನು ಸ್ಟುಡಿಯೋ ಮತ್ತು ತಮ್ಮ ಕಚೇರಿ ನಿರ್ಮಾಣಕ್ಕೆ ವ್ಯಯಿಸಿರುವ ಪ್ರಶಾಂತ್ ವರ್ಮಾ ಇದೀಗ ಸಿನಿಮಾ ಪ್ರಾರಂಭಕ್ಕೆ ಮೀನ-ಮೇಷ ಎಣಿಸುತ್ತಿದ್ದು ಇದು ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಕೆಲವು ನಿರ್ಮಾಣ ಸಂಸ್ಥೆಗಳು ಪ್ರಶಾಂತ್ ವರ್ಮಾ ವಿರುದ್ಧ ತೆಲುಗಿನ ಫಿಲಂ ಚೇಂಬರ್ ಮೆಟ್ಟಿಲು ಏರಿದ್ದು, ವರ್ಮಾ ವಿರುದ್ಧ ದೂರು ನೀಡಿವೆಯಂತೆ.
For More Updates Join our WhatsApp Group :
