ಬೆಂಗಳೂರು: ಚನ್ನಪಟ್ಟಣದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗ ದಿಢೀರ್ ಮಮತೆ ಬಂದಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಶುಕ್ರವಾರ ವ್ಯಂಗ್ಯವಾಡಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ದೆಹಲಿಯಲ್ಲಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯವರೆಗೆ ಚನ್ನಪಟ್ಟಣ ಅಭಿವೃದ್ಧಿ ಮಾಡಬೇಡಿ ಎಂದು ಡಿಕೆ ಶಿವಕುಮಾರ್ರನ್ನು ತಡೆದಿದ್ದು ಯಾರು? ಸಂಸದರಾಗಿ ಡಿಕೆ ಶಿವಕುಮಾರ್ ಸಹೋದರನ ಕೊಡುಗೆ ಏನು? ಅವರು ಯಾರು ಬೇಕಾದರೂ ಅಭ್ಯರ್ಥಿಯಾಗಬಹುದು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಅಭ್ಯರ್ಥಿ ಆಗಬಹುದು. ನಮ್ಮ ಕಡೆಯಿಂದ ಅಭ್ಯರ್ಥಿ ಯಾರು ಎಂದು ಕಾಲ ನಿರ್ಧರಿಸುತ್ತದೆ ಎಂದು ತಿಳಿಸಿದರು.
ಯೋಗಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. 2014ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ. ಮೈಸೂರಿನ ಅರಮನೆ ಮೈದಾನದಲ್ಲೂ ಮೋದಿ ಯೋಗ ಮಾಡಿದರು. ಯೋಗಕ್ಕೆ ಪ್ರಧಾನಿಗಳ ಪ್ರೊತ್ಸಾಹ ಹೆಚ್ಚು. ಇದರಿಂದಾಗಿ ಹೆಚ್ಚು ಪ್ರಚಾರ ದೊರೆತಿದೆ. ಯೋಗ ಕಾಯಿಲೆಗಳಿಂದ ಸ್ವಲ್ಪ ಮುಕ್ತಿ ನೀಡುತ್ತದೆ. ಆರೋಗ್ಯವಂತವಾಗಿರಲು ನಿತ್ಯ ಯೋಗ ಅಳವಡಿಸಿಕೊಳ್ಳಬೇಕು ಎಂದರು.