ಗೋಕಾಕ್: ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನಾವು ಇನ್ನೂ ಒಪ್ಪಿಲ್ಲ, ಒಪ್ಪೋದು ಇಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನಾವು ಇನ್ನೂ ಒಪ್ಪಿಲ್ಲ.
ನಮಗೇನಿದ್ದರೂ ಹೈಕಮಾಂಡ್ ಅಷ್ಟೇ ಮುಖ್ಯ. ಹೈಕಮಾಂಡ್ ಅಪ್ಪಣೆ ಮೇರೆಗೆ ನಾನು ಕಾರ್ಯ ನಿರ್ವಹಿಸುತ್ತೇನೆಯೇ ವಿನಃ ರಾಜ್ಯ ನಾಯಕರ ಅಪ್ಪಣೆ ಮೇರೆಗೆ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಅವರು ಅಸಮಾಧಾನ ಹೊರಹಾಕಿದರು.
ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರು ಪಾದಯಾತ್ರೆ ಮಾಡುತ್ತಿರುವುದನ್ನು ಸ್ವಾಗತ ಮಾಡುತ್ತೇನೆ, ಅದಕ್ಕಿಂತ ಮುಂಚಿತವಾಗಿ ದೆಹಲಿ ಹೈಕಮಾಂಡ್ಗೆ ಮಾಡುತ್ತೇನೆ.ಮುಡಾಗಿಂತಲೂ ವಾಲ್ಮಿಕಿ ಹಗರಣ ದೊಡ್ಡದಿದೆ ಅದನ್ನು ಖಂಡಿಸಿ ಬಳ್ಳಾರಿ ಪಾದಯಾತ್ರೆಗೆ ಅವಕಾಶ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಮುಡಾಕ್ಕಿಂತಲೂ ವಾಲ್ಮಿಕಿ ನಿಗಮದಲ್ಲಿ ನಡೆದಿರುವುದು ದೊಡ್ಡ ಹಗರಣ ಹಾಗಾಗಿ ನಾನು ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಮತ್ತು ಇನ್ನು ಕೆಲವು ಶಾಸಕರು ಸೇರಿ ಕೂಡಲ ಸಂಗಮದಿಂದ ಪಾದಯಾತ್ರೆ ನಡೆಸಬೇಕೆಂದುಕೊಂಡಿದ್ದೇವೆ. ಈಗಾಗಲೆ ಹೈಕಮಾಂಡ್ ಬಳಿ ಒಮ್ಮೆ ಕೇಳಿದ್ದೇನೆ, ಅವರು ಸ್ವಲ್ಪ ತಡೆಯಿರಿ ಎಂದಿದ್ದಾರೆ. ಇಡೀ ಪಕ್ಷ ಒಟ್ಟಾಗಿ ಪಾದಯಾತ್ರೆ ಮಾಡಿದ್ರೆ ಉತ್ತಮ ಇಲ್ಲವಾದರೆ ನಾನು ಯತ್ನಾಳ್ ಹಾಗು ಕೆಲವು ಶಾಸಕರು ಸೇರಿ ಪಾದಯಾತ್ರೆ ಮಾಡಬೇಕೆಂದುಕೊಂಡಿದ್ದೇವೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ಸಿಡಿ ಶಿವು ಬಿಡಬೇಕು. ಮಹಾನಾಯಕನ ಹೆಸರು ಬದಲಾಗಿದೆ ಈಗ ಅವರು ಸಿಡಿ ಶಿವು. ಮಹಾನಾಯಕ ಅಂದ್ರೆ ಅಂಬೇಡ್ಕರ್ ಅವರಿಗೆ ಅವಮಾನ ಆಗುತ್ತದೆ ಅಂತಾ ನಾನು ಕುಮಾರಸ್ವಾಮಿ ಸೇರಿ ಸಿಡಿ ಶಿವು ಅಂತಾ ಮರು ನಾಮಕರಣ ಮಾಡಿದ್ದೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನ ಗೆಲ್ಲಲು ಸಿದ್ದರಾಮಯ್ಯನವರೇ ಕಾರಣ. ಆದರೆ, ಕೆಲವರು ಎದೆ ಉಬ್ಬಿಸಿ ಈ ಸರ್ಕಾರ ಬರಲು ತಮ್ಮ ಪಾತ್ರವೂ ಇದೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.