ನೀರಿನ ಕೊರತೆ ಮೂತ್ರಪಿಂಡದ ಕಲ್ಲುಗಳಿಗೆ ಕಾರಣ, ಲಕ್ಷಣಗಳು ಮತ್ತು ತಡೆ.
ಕೆಲವರಿಗೆ ನೀರು ಕುಡಿಯುವುದು ಎಂದರೆ ಅಲರ್ಜಿ. ನೀರು ಎಂದರೆ ಸಾಕು ಮಾರು ದೂರ ಹೋಗುವವರು ನಮ್ಮ ಮಧ್ಯೆಯೇ ಇದ್ದಾರೆ. ಒತ್ತಡದ ಜೀವನ, ಕೆಲಸದ ಚಿಂತೆ ಮತ್ತು ಬಾಯಾರಿಕೆಯಾಗದಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಜನ ನೀರು ಕುಡಿಯುವ ಅಭ್ಯಾಸದ ಬಗ್ಗೆ ಹೆಚ್ಚಾಗಿ ಗಮನ ಕೊಡುವುದಿಲ್ಲ. ಆದರೆ ದೇಹಕ್ಕೆ ಬೇಕಾದಷ್ಟು ಅಂದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗಬಹುದು ಎಂಬುದು ನಿಮಗೆ ತಿಳಿದಿದೆಯೇ… ಹೌದು, ನೀರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ, ಆದರೆ ಅದರ ಪ್ರಮಾಣ ಕಡಿಮೆಯಾದಾಗ, ದೇಹದ ಸಮತೋಲನವು ತೊಂದರೆಗೊಳಗಾಗಲು ಪ್ರಾರಂಭಿಸುತ್ತದೆ. ಆರಂಭದಲ್ಲಿ, ಇದರ ಲಕ್ಷಣಗಳು ಸೌಮ್ಯವಾಗಿರಬಹುದು, ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಕ್ರಮೇಣ, ಈ ಸಮಸ್ಯೆ ಹೆಚ್ಚಾಗುತ್ತದೆ ಬಳಿಕ ಇದು ಮೂತ್ರಪಿಂಡದ ಕಲ್ಲುಗಳಾಗಿ ಬೆಳೆಯಬಹುದು. ಹಾಗಾದರೆ ನೀರು ಕಡಿಮೆ ಕುಡಿಯುವ ಅಭ್ಯಾಸ ಕಿಡ್ನಿ ಸ್ಟೋನ್ ಗೆ ಹೇಗೆ ಕಾರಣವಾಗುತ್ತದೆ, ಅದರ ಲಕ್ಷಣಗಳು ಹೇಗಿರುತ್ತದೆ ಮತ್ತು ಅದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ನೀರು ಕಡಿಮೆ ಕುಡಿಯುವ ಅಭ್ಯಾಸವು ಮೂತ್ರಪಿಂಡದ ಕಲ್ಲುಗಳಿಗೆ ಹೇಗೆ ಕಾರಣವಾಗುತ್ತದೆ?
ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗದಿದ್ದಾಗ, ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಸಫ್ದರ್ಜಂಗ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಡಾ. ಹಿಮಾಂಶು ವರ್ಮಾ ಹೇಳುತ್ತಾರೆ. ಇದು ಮೂತ್ರಪಿಂಡಗಳಲ್ಲಿನ ಖನಿಜಗಳು ಮತ್ತು ಲವಣಗಳು ಸರಿಯಾಗಿ ಹೊರಹಾಕುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ, ಅದು ಕ್ರಮೇಣ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಈ ಸಂಗ್ರಹವಾದ ವಸ್ತುಗಳು ಅಂತಿಮವಾಗಿ ಮೂತ್ರಪಿಂಡದ ಕಲ್ಲುಗಳನ್ನು ರೂಪಿಸುತ್ತವೆ.ನಿರಂತರವಾಗಿ ಕಡಿಮೆ ನೀರು ಕುಡಿಯುವುದರಿಂದ ಮೂತ್ರವು ಕೇಂದ್ರೀಕೃತವಾಗುತ್ತದೆ, ಕಲ್ಲಿನ ರಚನೆಯ ಸಾಧ್ಯತೆ ಹೆಚ್ಚಾಗುತ್ತದೆ. ಬೆವರು ಕಡಿಮೆ ಬರುವವರಲ್ಲಿ, ಉಪ್ಪು ಮತ್ತು ಪ್ರೋಟೀನ್ ಅಧಿಕವಾಗಿರುವ ಆಹಾರವನ್ನು ಸೇವಿಸುವವರಲ್ಲಿ ಈ ರೀತಿಯ ಅಪಾಯ ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚುವರಿಯಾಗಿ, ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಚಳಿಗಾಲದಲ್ಲಿ ನೀರು ಕಡಿಮೆ ಕುಡಿಯುವುದು ಸಹ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುವ ಅಪಾಯಕಾರಿ ಅಂಶಗಳಾಗಬಹುದು.
ದೇಹದಲ್ಲಿ ನೀರಿನ ಕೊರತೆಯಾದಾಗ ಕಂಡುಬರುವ ಲಕ್ಷಣಗಳು:
ನೀರಿನ ಕೊರತೆ ಇದ್ದಾಗ, ದೇಹವು ಅನೇಕ ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ಪದೇ ಪದೇ ದಣಿವು, ಒಣ ಬಾಯಿ ಮತ್ತು ತಲೆನೋವು ಸಾಮಾನ್ಯ ಲಕ್ಷಣಗಳಾಗಿವೆ. ಗಾಢ ಹಳದಿ ಮೂತ್ರ ಬರುವುದು ಕೂಡ ನಿರ್ಜಲೀಕರಣದ ಸಂಕೇತವೂ ಆಗಿರಬಹುದು. ಕೆಲವರಲ್ಲಿ ತಲೆತಿರುಗುವಿಕೆ, ಮಲಬದ್ಧತೆ ಮತ್ತು ಒಣ ಚರ್ಮದ ಸಮಸ್ಯೆಯೂ ಕಂಡುಬರಬಹುದು. ಈ ರೀತಿ ನೀರಿನ ಕೊರತೆಯು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳು ಮತ್ತು ಹೊಟ್ಟೆಯ ಕೆಳಭಾಗ ಅಥವಾ ಬೆನ್ನಿನ ಕೆಳಭಾಗದಲ್ಲಿ ಬರುವ ನೋವಿಗೆ ಕಾರಣವಾಗಬಹುದು.
ತಡೆಯುವುದು ಹೇಗೆ?
- ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
- ಬಾಯಾರಿಕೆಯಾಗುವ ಮೊದಲೇ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
- ಚಳಿಗಾಲದಲ್ಲಿಯೂ ನೀರಿನ ಸೇವನೆಯನ್ನು ಕಡಿಮೆ ಮಾಡಬೇಡಿ.
- ಅತಿಯಾದ ಉಪ್ಪು ಮತ್ತು ಜಂಕ್ ಫುಡ್ ಸೇವನೆ ಮಾಡುವುದನ್ನು ತಪ್ಪಿಸಿ.
- ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸವನ್ನು ಬಿಟ್ಟುಬಿಡಿ.
For More Updates Join our WhatsApp Group :



