ಈ ಅಭ್ಯಾಸ ನಿಮಗೆ ಲಾಭವೋ ಅಥವಾ ತೊಂದರೆಯೋ?
ನಮ್ಮ ದೇಹಕ್ಕೆ ನೀರು ಎಷ್ಟು ಮುಖ್ಯ ಎಂಬುದು ತಿಳಿದಿರುವ ವಿಷಯ. ದೇಹದ ಶೇಕಡಾ 60 ರಿಂದ 70 ರಷ್ಟು ಭಾಗ ನೀರಿನಿಂದ ಕೂಡಿದೆ. ಅದಕ್ಕಾಗಿಯೇ ವೈದ್ಯರು ಪ್ರತಿದಿನ ಕನಿಷ್ಠ 8 ಗ್ಲಾಸ್ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ಮಲಗುವ ಮುನ್ನ ನೀರು ಕುಡಿಯುವ ವಿಷಯಕ್ಕೆ ಬಂದರೆ ಇದೆ ಅಭಿಪ್ರಾಯಗಳು ಭಿನ್ನವಾಗಿರುತ್ತವೆ. ಹೌದು, ಈ ಅಭ್ಯಾಸ ಬಹಳ ಪ್ರಯೋಜನಗಳನ್ನು ಹೊಂದಿದ್ದರೂ ಕೂಡ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ನಿದ್ರೆಗೆ ಅಡ್ಡಿಯಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಮಲಗುವ ಮುನ್ನ ನೀರು ಕುಡಿಯುವುದರಿಂದ ಯಾವ ರೀತಿಯ ಪ್ರಯೋಜನ ಸಿಗುತ್ತದೆ, ಅತಿಯಾಗಿ ನೀರು ಕುಡಿದರೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಮಲಗುವ ಮುನ್ನ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು:
ಮಲಗುವ ಮುನ್ನ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಕುಡಿಯುವ ನೀರು ದೇಹವನ್ನು ತಂಪಾಗಿಸುತ್ತದೆ ಮತ್ತು ನಿದ್ರೆ ಚೆನ್ನಾಗಿ ಬರಲು ಸಹಾಯ ಮಾಡುತ್ತದೆ. ಇನ್ನು, ಬೆಚ್ಚಗಿನ ನೀರು ಕುಡಿಯುವುದರಿಂದ ಸ್ನಾಯು ನೋವು ಕಡಿಮೆಯಾಗುವುದಲ್ಲದೆ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. ನಿಂಬೆ ರಸದೊಂದಿಗೆ ಬೆರೆಸಿದ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಚರ್ಮ ಕಾಂತಿಯುತವಾಗುತ್ತದೆ.
ಅತಿಯಾಗಿ ನೀರು ಕುಡಿಯುವುದರಿಂದಾಗುವ ಸಮಸ್ಯೆಗಳು:
ಮಲಗುವ ಮುನ್ನ ಹೆಚ್ಚು ನೀರು ಕುಡಿದರೆ, ನೋಕ್ಟೋರಿಯಾ ಎಂಬ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ರಾತ್ರಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗಿ ಬರಬಹುದು. ಇದು ನಿದ್ರೆಗೆ ಭಂಗ ತರಬಹುದು. ಸರಿಯಾಗಿ ನಿದ್ರೆ ಆಗದಿದ್ದರೆ ಮರುದಿನ ಆಯಾಸ, ತಲೆನೋವು ಮತ್ತು ಏಕಾಗ್ರತೆಯ ಕೊರತೆ ಉಂಟಾಗಬಹುದು. ದೀರ್ಘಾವಧಿಯಲ್ಲಿ, ಇದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ವೈದ್ಯರ ಈ ಸಲಹೆಯನ್ನು ತಪ್ಪದೆ ಪಾಲಿಸಿ:
- ನೀರು ಕುಡಿದ ತಕ್ಷಣ ಮಲಗುವುದು ಒಳ್ಳೆಯದಲ್ಲ.
- ನಿದ್ರೆಗೆ ಹೋಗುವ ಕನಿಷ್ಠ 2 ಗಂಟೆಗಳ ಮೊದಲು ನೀರು ಕುಡಿಯುವುದು ಒಳ್ಳೆಯದು.
- ರಾತ್ರಿ ಊಟದ ಒಂದು ಗಂಟೆಯ ನಂತರ ನೀರು ಕುಡಿಯುವುದು ಸರಾಗ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
- ಮಲಗುವ ಮೊದಲು ಬಾಯಾರಿಕೆಯಾದಲ್ಲಿ, ಗ್ಲಾಸ್ ತುಂಬಾ ನೀರು ಕುಡಿಯುವುದಕ್ಕಿಂತ ಕೆಲವು ಸಿಪ್ಸ್ ನೀರು ಕುಡಿಯುವುದು ಒಳ್ಳೆಯದು.
For More Updates Join our WhatsApp Group :




