ಕಾರಿನಲ್ಲಿ AC ಆನ್ ಮಾಡಿದ್ರೆ ಹೆಚ್ಚುವರಿ ಇಂಧನ ಖಾಲಿಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಎಷ್ಟು ಇಂಧನ ಬಳಕೆಯಾಗುತ್ತದೆ ಎಂಬುದರ ಬಗ್ಗೆ ನಿಖರವಾಗಿ ಯಾರಿಗೂ ತಿಳಿದಿರುವುದಿಲ್ಲ. ಇದನ್ನು ಎಲ್ಲಾ ಕಾರು ಮಾಲೀಕರು ತಿಳಿದುಕೊಳ್ಳುವುದು ತುಂಬಾ ಮುಖ್ಯ.
ಯಾವ ರೀತಿಯ (ಸೆಡಾನ್, ಹ್ಯಾಚ್ಬ್ಯಾಕ್, ಎಸ್ಯುವಿ) ಕಾರು, ಅದರ ಎಂಜಿನ್ ಸಾಮರ್ಥ್ಯವೆಷ್ಟು ಹಾಗೂ AC ಪರ್ಫಾಮೆನ್ಸ್ ಆಧರಿಸಿ ಕಾರುಗಳಲ್ಲಿ ಹೆಚ್ಚಿನ ಇಂಧನ ಬಳಕೆಯಾಗುತ್ತದೆ. ಇದರ ಬಗ್ಗೆ ಕೆಲವು ಮೌಲ್ಯಮಾಪನಗಳನ್ನು ಮಾಡುವ ಮೂಲಕ ಸ್ಪಷ್ಟ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಮೊದಲೇ ಹೇಳಿದಂತೆ ಆಯಾ ಕಾರುಗಳ ಎಂಜಿನ್ ಸಾಮರ್ಥ್ಯವು ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಸಣ್ಣ ಕಾರುಗಳು 1.2 ನಿಂದ 1.5 ಲೀ. ಸಾಮರ್ಥ್ಯದ ಎಂಜಿನ್ಗಳನ್ನು ಹೊಂದಿರುತ್ತವೆ. ಹಾಗೆಯೇ ದೊಡ್ಡ ವಾಹನಗಳಾದರೇ 2ಲೀ. ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಎಂಜಿನ್ಗಳನ್ನು ಹೊಂದಿರುತ್ತವೆ. ಈ ದೊಡ್ಡ ಎಂಜಿನ್ಗಳು ಕಾರು ಚಾಲನೆಯಲ್ಲಿದ್ದಾಗ AC ಬಳಸಿದರೆ ಹೆಚ್ಚಿನ ಇಂಧನವನ್ನು ಕುಡಿಯುತ್ತವೆ.
ಉದಾಹರಣೆಗೆ 2ಲೀ. ಎಂಜಿನ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯವಿರುವ ಕಾರುಗಳು ಚಾಲನೆಯಲ್ಲಿದ್ದಾಗ ಒಂದು ಗಂಟೆ ಸತತವಾಗಿ AC ಬಳಕೆ ಮಾಡಿದ್ರೆ 0.5 ರಿಂದ 0.7 ಲೀಟರ್ನಷ್ಟು ಇಂಧನವನ್ನು ಬಳಸಬಹುದು. ಹಾಗೆಯೇ 1.2 ರಿಂದ 1.5 ಲೀ. ಸಾಮರ್ಥ್ಯದ ಸಣ್ಣ ಕಾರುಗಳು ಒಂದು ಗಂಟೆಗೆ 0.2 ರಿಂದ 0.4 ಲೀ.ನಷ್ಟು ಪೆಟ್ರೋಲ್ ಅನ್ನು ಬಳಸಬಹುದು.
ಅತಿ ಮುಖ್ಯವಾಗಿ ಎಸಿ ಬಳಸುವಾಗ ಕಾರಿನ ವೇಗ ಎಷ್ಟಿದೆ ಎಂಬುದನ್ನು ಆಧರಿಸಿ ಕೂಡ ಇಂಧನ ಬಳಕೆ ಹೆಚ್ಚಾಗುತ್ತದೆ. ಎಸಿ ಬಳಕೆಗೆ ಸಂಬಂಧಿಸಿದ ಇಂಧನ ಬಳಕೆಯಲ್ಲಿ ವಾಹನದ ವೇಗವು ಸಹ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ನಿಲ್ಲಿಸಿರುವ ಕಾರಿಗಿಂತ ಚಾಲನೆಯಲ್ಲಿರುವ ವಾಹನದಲ್ಲಿ AC ಬಳಸಿದರೆ ಇಂಧನ ಹೆಚ್ಚಾಗಿ ಬಳಕೆಯಾಗುತ್ತದೆ. ಅಂದರೆ ಎಂಜಿನ್ ಮೇಲಿನ ಹೆಚ್ಚುವರಿ ಹೊರೆಯಿಂದಾಗಿ ಇದು ಒಟ್ಟಾರೆ ಮೈಲೇಜ್ ಅನ್ನು ಕಡಿಮೆ ಮಾಡುತ್ತದೆ.
ಪ್ರತಿಯೊಂದು ಕಾರಿನಲ್ಲೂ AC ಸಿಸ್ಟಮ್ ಇಂಧನ ಬಳಕೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಕಾರಿನ ಕ್ಯಾಬಿನ್ ಅನ್ನು ತಂಪಾಗಿಸಲು ಕಂಪ್ರೆಷರ್ ಹೆಚ್ಚು ಶ್ರಮಿಸುತ್ತದೆ. ಅಲ್ಲದೇ ಹೊರಗಿನ ವಾತಾವರಣ ತುಂಬಾ ಬಿಸಿಯಿದ್ದಲ್ಲಿ, ಈ ಸಂಪೂರ್ಣ AC ಸಿಸ್ಟಮ್ಗೆ ಪವರ್ ನೀಡಲು ಇಂಧನವು ಹೆಚ್ಚಾಗಿ ಖರ್ಚಾಗುತ್ತದೆ.
ಇಂತಹ ಸನ್ನಿವೇಶಗಳಲ್ಲಿ ಎಸಿಯನ್ನು ಟಾಪ್ನಲ್ಲಿ ಇಡುವುದಕ್ಕಿಂತ ಮಧ್ಯಮವಾಗಿ ಇಟ್ಟರೇ ಹೆಚ್ಚಿನ ಇಂಧನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇತ್ತೀಚಿನ ಹೊಸ ಕಾರುಗಳು ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವುದರಿಂದ ಹಳೆಯ ಕಾರುಗಳಿಗೆ ಹೋಲಿಸಿದರೆ AC ಬಳಕೆಯಲ್ಲಿದ್ದಾಗ ಹೊಸ ಕಾರುಗಳು ಇಂಧನವನ್ನು ಉಳಿಸಲು ಸಹಾಯ ಮಾಡುತ್ತವೆ.
ಸರಿಯಾದ ನಿರ್ವಹಣೆ ಕೂಡ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬೇಡಿ. ಕಾಲ ಕಾಲಕ್ಕೆ AC ವೆಂಟ್ಗಳ ನಿರ್ವಹಣೆ ತುಂಬಾ ಮುಖ್ಯ. ಕಾರುಗಳನ್ನು ಸಾಧ್ಯವಾದಷ್ಟು ನೆರಳಿನಲ್ಲಿ ಪಾರ್ಕ್ ಮಾಡುವುದರಿಂದ ಚಾಲನೆ ವೇಳೆ AC ಸಿಸ್ಟಮ್ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡಿ ಹೆಚ್ಚಿನ ಮೈಲೇಜ್ ಪಡೆಯಬಹುದು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.