ಶಿವಮೊಗ್ಗ: ವಯನಾಡು ಸಂತ್ರಸ್ಥ ನಿಧಿಗೆ ರಾಷ್ಟ್ರೀಯ ಕಬ್ಬಡಿ ಕ್ರೀಡಾಪಟು ಒಬ್ಬರು ಕ್ರೀಡಾ ವೇತನ ದೇಣಿಗೆ ನೀಡಿದ್ದಾರೆ. ವಯನಾಡಿನಲ್ಲಿ ಬೃಹತ್ ಭೂಕುಸಿತ ಸಂಭವಿಸಿದ ಪರಿಣಾಮ ಸಾಕಷ್ಟು ಆಸ್ತಿ ಹಾಗೂ ಪ್ರಾಣಹಾನಿ ಸಂಭವಿಸಿದೆ. ಹುಡುಕಿದಷ್ಟು ದೇಹಗಳು ಮಣ್ಣಲ್ಲಿ ಸಿಗುತ್ತಲೇ ಇವೆ.
ಹಲವೆಡೆ ದೇಹದ ಭಾಗಗಳು ಮಾತ್ರ ಪತ್ತೆಯಾಗಿವೆ. ಗುರುತು ಸಿಕ್ಕ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು ಗುರುತು ಸಿಗದ ದೇಹಗಳನ್ನು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ.
ಕೇರಳದ ವಯನಾಡು ಭೂಕುಸಿತ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಇದರಿಂದಾಗಿ 200ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮನೆಗಳು ಮಣ್ಣಿನಲ್ಲಿ ಮುಚ್ಚಿ ಹೋಗಿವೆ. ಮನೆ ಕುಟುಂಬಸ್ಥರನ್ನು ಕಳೆದುಕೊಂಡು ಹಲವಾರು ಜನ ಬೀದಿಪಾಲಾಗಿದ್ದಾರೆ. ಮಳೆ ಚಳಿ ನಡುವೆ ಆಶ್ರಯದಲ್ಲಿರುವ ಜನರಿಗೆ ಸಹಾಯದ ಅವಶ್ಯಕತೆ ಇದೆ. ಹೀಗಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಪಟ್ಟಣದ ವಿದ್ಯಾರ್ಥಿನಿ ದೇಣಿಗೆ ನೀಡಿದ್ದಾರೆ.
9 ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ಅವರು ದೇಣಿಗೆ ನೀಡಿದ ವಿದ್ಯಾರ್ಥಿನಿ. ಜಲ ದುರಂತದ ಸಂತ್ರಸ್ಥರಿಗೆ ತನಗೆ ದೊರೆತ ಕ್ರೀಡಾ ವೇತನ ನೀಡಿದ ಬಾಲಕಿ ಮಾನವೀಯತೆ ಮೆರೆದಿದ್ದಾರೆ. ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಮುಖಾಂತರ ಇಂದು ವಿದ್ಯಾರ್ಥಿನಿ ವಯನಾಡು ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಸರ್ಕಾರದಿಂದ ತನಗೆ ದೊರೆತ ಹತ್ತು ಸಾವಿರ ರೂಪಾಯಿ ಕ್ರೀಡಾ ವೇತನವನ್ನು ಸಂತ್ರಸ್ತರಿಗೆ ಬಾಲಕಿ ನೀಡಿದ್ದಾರೆ.
ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸಿ ದಿನಗಳೇ ಕಳೆದಿವೆ. ಆದರೂ ಕೂಡ ಮಣ್ಣನಲ್ಲಿ ಮೃತ ದೇಹಗಳು ಪತ್ತೆಯಾಗುತ್ತಲೇ ಇವೆ. ಶವಾಗಾರಗಳ ಮುಂದೆ ಜನರು ಜಮಾಯಿಸಿದ್ದಾರೆ. ಮೃತದೇಹಗಳಲ್ಲಿ ತಮ್ಮವರ ದೇಹ ಇರದೇ ಇರಲಿ, ಅವರು ಬದುಕಿರಲಿ ಎಂದು ದೇವರನ್ನು ಪ್ರಾರ್ಥನೆ ಮಾಡುತ್ತಿದ್ದಾರೆ.
ಹಲವು ದೇಹಗಳು ಅನಾಥವಾಗಿದ್ದು, ಅಂತ್ಯಸಂಸ್ಕಾರಕ್ಕಾಗಿ ಕುಟುಂಬದವರಿಗೆ ಕಾಯಲಾಗುತ್ತಿದೆ. ಮೇಪಾಡಿಯ ಪುತ್ತುಮಲ ಎಂಬಲ್ಲಿ ಗುರುತು ಸಿಗದ ಮೃತ ದೇಹಗಳ ಅಂತ್ಯ ಸಂಸ್ಕಾರವನ್ನು ಜಿಲ್ಲಾಡಳಿತ ನೆರವೇರಿಸಿದೆ. ಕಳೆದ ರಾತ್ರಿ ಮೂವತ್ತು ಮೃತ ದೇಹಗಳ ಪೈಕಿ ಎಂಟು ಮೃತ ದೇಹಗಳನ್ನು ಅಂತ್ಯಸಂಸ್ಕಾರ ಮಾಡಲಾಗಿದೆ.
ಗುಡ್ಡ ಕುಸಿತದಿಂದ ಸರ್ವನಾಶವಾಗಿರುವ ನಾಲ್ಕು ಗ್ರಾಮಗಳಲ್ಲಿ ಕಳೆದ ಆರು ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ವಯನಾಡು ಜನರ ಜೀವನಾಡಿ ಎನಿಸಿರುವ ಚಾಲಿಯಾರ್ ನದಿಯಲ್ಲಿ ಇನ್ನೂ ಮೃತದೇಹಗಳು ತೇಲಿಬರುತ್ತಿವೆ. ಸದ್ಯ ನಾಪತ್ತೆ ಆಗಿರುವವರಿಗಾಗಿ ಇವತ್ತು ಕೂಡ ಶೋಧ ಕಾರ್ಯ ಮುಂದುವರೆದಿದೆ.
ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ ನೂರಾರು ಜನರ ಕನಸಿನ ಜೊತೆಗೆ ಬದುಕಿನ ಭರವಸೆಗಳೂ ಧರೆಗುರುಳಿದೆ. ಭೂಕುಸಿತದಲ್ಲಿ ಜೀವ ಕಳೆದುಕೋಮಡವರೇನೋ ಇಲ್ಲಿನ ಯಾತ್ರೆ ಮುಗಿಸಿ ಹೊರಟಿದ್ದಾರೆ. ಆದರೆ ಪ್ರಕೃತಿಯ ಮುನಿಸಿಗೆ ಎದೆಯೊಡ್ಡಿ ಜೀವ ಉಳಿಸಿಕೊಂಡವರು ಮುಂದಿನ ಜೀವನ ಯಾತ್ರೆ ಸಾಗಿಸುವುದು ಹೇಗೆ ಎನ್ನುವ ಯಕ್ಷ ಪ್ರಶ್ನೆಗಳಿಗೆ ಇದೀಗ ಉತ್ತರವಿಲ್ಲದೆ ಕಂಗಾಲಾಗಿದ್ದಾರೆ.
ಹೀಗಾಗಿ ಸಂತ್ರಸ್ತರಿಗಾಗಿ ಸಿನಿ ತಾರೆಯರು, ಗಣ್ಯರು, ರಾಜಕಾರಣಿಗಳ ಮನ ಮಿಡಿದಿದೆ. ಅವರ ಸಹಾಯಕ್ಕಾಗಿ ಕೈಲಾದಷ್ಟು ಸಹಾಯ ಮಾಡಲು ಹಲವಾರು ಜನ ಮುಂದಾಗಿದ್ದಾರೆ. ಈ ಪೈಕಿ ವಯನಾಡು ಸಂತ್ರಸ್ಥರಿಗೆ 9 ನೇ ತರಗತಿ ವಿದ್ಯಾರ್ಥಿನಿ ಸಹಾಯ ಹಸ್ತ ಚಾಚಿರುವುದಕ್ಕೆ ವಿದ್ಯಾರ್ಥಿನಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.