ನವದೆಹಲಿ: ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದೆಹಲಿ ಜಲಸಂಪನ್ಮೂಲ ಸಚಿವೆ ಅತಿಶಿ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟು ಇದ್ದು ಹರಿಯಾಣ ಸರ್ಕಾರ ಯಮುನಾ ನದಿಯಿಂದ ದೆಹಲಿಗೆ ಬರಬೇಕಾದ ನೀರನ್ನು ಬಿಡುಗಡೆ ಮಾಡುತ್ತಿಲ್ಲವೆಂದು ಆರೋಪಿಸಿ ಭೋಗಲ್ ಜಂಗ್ಪುರದಲ್ಲಿ ಅತಿಶಿ ಜೂನ್ 21 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು
ಅನಿರ್ದಿಷ್ಟಾವಧಿ ಉಪವಾಸದಿಂದ ಇದೀಗ ಅತಿಶಿ ಆರೋಗ್ಯ ಏರುಪೇರಾಗಿದ್ದು, ಇಂದು ಮುಂಜಾನೆ ದೆಹಲಿಯ ಲೋಕನಾಯಕ ಜೈ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪವಾಸದ 4ನೇ ದಿನ ವೈದ್ಯರು ಅತಿಶಿ ಅವರ ಆರೋಗ್ಯ ತಪಾಸಣೆ ನಡೆಸಿದಾಗ ಆರೋಗ್ಯದ ಸ್ಥಿತಿ ಕಂಡು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರೂ ದಾಖಲಾಗಲು ನಿರಾಕರಿಸಿದ್ದರು. ಆದರೆ, ಸೋಮವಾರ ತಡರಾತ್ರಿ ಅತಿಶಿ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 43ಕ್ಕೆ ಕುಸಿದಿತ್ತು, ಮಂಗಳವಾರಕ್ಕೆ ಅಂದರೆ ಇಂದು ಬೆಳಗ್ಗೆ ತಪಾಸಣೆ ನಡೆಸಿದಾಗ 36ಕ್ಕೆ ಕುಸಿದಿದ್ದು, ಕೂಡಲೇ ಅವರನ್ನು ದಾಖಲಿಸುವಂತೆ ಎಲ್‌ಎನ್‌ಜೆಪಿ ಆಸ್ಪತ್ರೆಯ ವೈದ್ಯರು ಸೂಚಿಸಿದ ಮೇರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಳೆದ ಐದು ದಿನಗಳಿಂದ ಸಚಿವೆ ಏನನ್ನೂ ಸೇವಿಸಿದ್ದಿರಲಿಲ್ಲ. 65.8 ಕೆಜಿ ಇದ್ದ ಅತಿಶಿ ಉಪವಾಸದ 4 ನೇ ದಿನದಲ್ಲಿ 63.6 ಕೆಜಿಗೆ ಇಳಿದಿದ್ದಾರೆ. ಒಟ್ಟು 2.2 ಕೆಜಿ ತೂಕ ಕಳೆದುಕೊಂಡಿದ್ದಾರೆ. ಜತೆಗೆ ಅವರ ಮೂತ್ರದ ಕೆಟೋನ್ ಮಟ್ಟವೂ ಹೆಚ್ಚುತ್ತಿದ್ದು ಇದು ದೇಹಕ್ಕೆ ಅಪಾಯಕಾರಿಯಾಗಿದೆ.