ಬೆಂಗಳೂರು: ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಡಿಯಾ ಎ ವಿರುದ್ಧ ಜಯ ಸಾಧಿಸುವ ಮೂಲಕ ಇಂಡಿಯಾ ಬಿ ತಂಡ ಶುಭಾರಂಭ ಮಾಡಿದೆ. ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಡಿಯಾ ಎ ತಂಡದ ವಿರುದ್ಧ ಇಂಡಿಯಾ ಬಿ ತಂಡ ಇಂದು 76 ರನ್ಗಳ ಜಯ ದಾಖಲಿಸಿತು. ಇದರೊಂದಿಗೆ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.
ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿದ್ದ ಇಂಡಿಯಾ ಬಿ ತಂಡ ನಾಲ್ಕನೇ ದಿನ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಲಿಲ್ಲ. ಆಕಾಶ್ ದೀಪ್ ಬಿಗುವಿನ ದಾಳಿಗೆ ಸಿಲುಕಿದ ಇಂಡಿಯಾ ಬಿ, 42 ಓವರ್ಗಳಲ್ಲಿ 184 ರನ್ಗಳಿಗೆ ಆಲೌಟ್ ಆಯಿತು. ಆ ಮೂಲಕ ಇಂಡಿಯಾ ಎ ತಂಡದ ಗೆಲುವಿಗೆ 275 ರನ್ಗಳ ಗುರಿ ನೀಡಿತು.
ಇಂಡಿಯಾ ಎ ಬ್ಯಾಟಿಂಗ್: ಗುರಿ ಬೆನ್ನಟ್ಟಿದ ಶುಭ್ಮನ್ ಗಿಲ್ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ (3) ಬೇಗನೆ ವಿಕೆಟ್ ಒಪ್ಪಿಸಿದರೆ, ಶುಭ್ಮನ್ 21 ರನ್ಗೆ ಔಟಾದರು. ಈ ಹಂತದಲ್ಲಿ ಬಿರುಸಿನ ಆಟಕ್ಕೆ ಮೊರೆ ಹೋದ ರಿಯಾನ್ ಪರಾಗ್ (31) ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಬಳಿಕ ಧ್ರುವ ಜುರೆಲ್ ಹಾಗೂ ತನುಶ್ ಕೊಟಿಯಾನ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದರಿಂದಾಗಿ, ಇಂಡಿಯಾ ಎ ತಂಡ 76 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು.
ತದನಂತರ, ಶಿವಂ ದುಬೆ (14) ಹಾಗೂ ಕುಲದೀಪ್ ಯಾದವ್ (14) ಅವರೊಂದಿಗೆ ಅಲ್ಪ ಜೊತೆಯಾಟವಾಡಿದ ಕೆ.ಎಲ್.ರಾಹುಲ್ (57) ಅರ್ಧಶತಕ ದಾಖಲಿಸಿದರು. ಚಹಾ ವಿರಾಮದ ಬಳಿಕ ದಾಳಿಗಿಳಿದ ಮುಕೇಶ್ ಕುಮಾರ್, ಕೆ.ಎಲ್.ರಾಹುಲ್ ವಿಕೆಟ್ ಪಡೆಯುವ ಮೂಲಕ ಇಂಡಿಯಾ ಬಿ ಮತ್ತೊಮ್ಮೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಕೆಳ ಕ್ರಮಾಂಕದಲ್ಲಿ ಪ್ರತಿರೋಧವೊಡ್ಡಿದ ಆಕಾಶ್ ದೀಪ್ 43 ರನ್ ಗಳಿಸಿದರಾದರೂ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.