ಮೈಸೂರು : ಟಿ.ನರಸೀಪುರ (T Narasipur) ತಾಲೂಕಿನ ಕೆಂಪಯ್ಯನಹುಂಡಿ ಗೇಟ್ ಬಳಿಯ ಹೋಟೆಲ್ವೊಂದರಲ್ಲಿ ಸ್ಫೋಟಕಗಳು (Bomb) ಪತ್ತೆಯಾಗಿವೆ. ಅಪರಿಚಿತರು ನೀಲಿ ಬಣ್ಣದ ಪ್ಲಾಸ್ಟಿಕ್ನಲ್ಲಿ ಸ್ಫೋಟಕ ವಸ್ತುಗಳನ್ನು ಇಟ್ಟು ಪರಾರಿಯಾಗಿದ್ದಾರೆ. ಈ ಸ್ಫೋಟಕ ವಸ್ತುಗಳನ್ನು ನೋಡಿದ ಹೋಟೆಲ್ ಸಿಬ್ಬಂದಿ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿ, ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಟ್ಯೂಬ್ ಆಕಾರದಲ್ಲಿರುವ 9 ಸ್ಪೋಟಕ ವಸ್ತುಗಳು ಮತ್ತು ಒಂದು ನಾಡ ಬಾಂಬ್ ಆಕಾರದ ವಸ್ತು ಪತ್ತೆಯಾಗಿದೆ.
ಕಲ್ಲು ಗಣಿಗಾರಿಕೆಗೆ ಮತ್ತು ಪ್ರಾಣಿಗಳ ಬೇಟೆಗೆ ಸ್ಫೋಟಕಗಳನ್ನು ಬಳಸಲು ತೆಗೆದುಕೊಂಡು ಹೋಗುತ್ತಿದ್ದರು ಎಂದು ಸಂಶಯ ವ್ಯಕ್ತವಾಗಿದೆ. ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದು, ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದ್ದಾರೆ.
ಟಿ. ನರಸಿಪುರ ತಾಲೂಕಿನಲ್ಲಿ ಮಾನವ-ಪ್ರಾಣಿ ಸಂಘರ್ಷ ಆಗಾಗ ನಡೆಯುತ್ತಿರುತ್ತದೆ. ಚಿರತೆ, ಹುಲಿ ದಾಳಿಯಿಂದ ಅನೇಕರು ಗಾಯಗೊಂಡಿದ್ದರೆ, ಕೆಲವರ ಪ್ರಾಣ ಪಕ್ಷಿ ಹಾರಿಹೋಗಿದೆ. ಇನ್ನು ಕೆಲವರು ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಅಪರಿಚಿತರು ಸ್ಫೋಟಕಗಳನ್ನು ತೆಗೆದುಕೊಂಡು ಹೋಗುತ್ತಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ.
ಕಳೆದ ವರ್ಷ ಮೈಸೂರು ದಸರಾ ಮೇಲೆ ಉಗ್ರರ ಕರಿ ನೆರಳು ಬಿದ್ದಿತ್ತು ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಮಾಡಲಾಗಿತ್ತು. ಶಂಕಿತರನ್ನು ವಶಕ್ಕೆ ಪಡೆಯಲಾಗಿತ್ತು.