ಮುಂಬೈ: ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಗೆ ಇ.ಡಿ ಸಮನ್ಸ್ ಜಾರಿಗೊಳಿಸಿದ್ದು, ಆಗಸ್ಟ್ 5ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಇದು ಯೆಸ್ ಬ್ಯಾಂಕ್ನ 3,000 ಕೋಟಿ ರೂ.ಗಳ ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದೆ. ಇಡಿ ಅಂಬಾನಿ ಕಂಪನಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಇದರ ಬೆನ್ನಲ್ಲೇ ಸಮನ್ಸ್ ನೀಡಿದೆ.
ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ. ಸುಮಾರು 3,000 ಕೋಟಿ ರೂ. ಮೊತ್ತದ ಬ್ಯಾಂಕ್ ಸಾಲ ವಂಚನೆ ಮತ್ತು ಅದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ಸಮನ್ಸ್ ನೀಡಲಾಗಿದೆ. ಆಗಸ್ಟ್ 5 ರಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ.
ಈ ಸಮನ್ಸ್ಗೂ ಮುನ್ನ, ತನಿಖಾ ಸಂಸ್ಥೆಯು ಜುಲೈ 24 ರಂದು ಅಂಬಾನಿ ಅವರಿಗೆ ಸಂಬಂಧಿಸಿದ ಕಂಪನಿಗಳ ಮೇಲೆ ದಾಳಿಯನ್ನು ನಡೆಸಿತ್ತು. ದಿಲ್ಲಿ ಮತ್ತು ಮುಂಬೈನ ಹಲವು ಸ್ಥಳಗಳಲ್ಲಿ ನಡೆದ ಈ ದಾಳಿಗಳಲ್ಲಿ ಹಲವಾರು ದಾಖಲೆಗಳು ಮತ್ತು ಕಂಪ್ಯೂಟರ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಎರಡು ಎಫ್ಐಆರ್ಗಳ ಆಧಾರದ ಮೇಲೆ ಈ ದಾಳಿಗಳನ್ನು ಜಾರಿ ನಿರ್ದೇಶನಾಲಯ ನಡೆಸಿತ್ತು.
ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, 2017-2019ರ ನಡುವೆ ಯೆಸ್ ಬ್ಯಾಂಕ್ನಿಂದ ಅಂಬಾನಿ ಸಮೂಹದ ಕಂಪನಿಗಳಿಗೆ ಸುಮಾರು 3,000 ಕೋಟಿ ರೂ. ಸಾಲವನ್ನು ಮಂಜೂರು ಮಾಡಲಾಗಿತ್ತು. ಆದರೆ ಈ ಸಾಲದ ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಲಾಗಿದೆ ಎಂಬ ಆರೋಪದ ಮೇಲೆ ತನಿಖೆ ಕೇಂದ್ರೀಕೃತವಾಗಿದೆ.
ಸಾಲ ಮಂಜೂರು ಮಾಡುವ ಸ್ವಲ್ಪ ಮೊದಲು ಯೆಸ್ ಬ್ಯಾಂಕ್ ಪ್ರವರ್ತಕರು ತಮ್ಮ ಸಂಸ್ಥೆಗಳಲ್ಲಿ ಹಣವನ್ನು ಸ್ವೀಕರಿಸಿದ್ದಾರೆ ಎಂದು ಇ.ಡಿ ಪತ್ತೆ ಮಾಡಿದ್ದು, ಈ ಸಂಭಾವ್ಯ ಲಂಚ ಮತ್ತು ಸಾಲದ ನಡುವಿನ ಸಂಬಂಧದ ಬಗ್ಗೆ ಸಂಸ್ಥೆ ತನಿಖೆ ನಡೆಸುತ್ತಿದೆ.
ದುರ್ಬಲ ಹಣಕಾಸು ಮೂಲಗಳನ್ನು ಹೊಂದಿರುವ ಕಂಪನಿಗಳಿಗೆ ಸಾಲ ನೀಡುವುದು, ನಕಲಿ ಘಟಕಗಳಿಗೆ ಹಣವನ್ನು ರವಾನಿಸುವುದು, ಮತ್ತು ಹಳೆಯ ಸಾಲಗಳನ್ನು ಮರುಪಾವತಿಸಲು ಹೊಸ ಸಾಲಗಳನ್ನು ನೀಡುವಂತಹ ಮಾದರಿಯಲ್ಲಿ ಹಲವಾರು ಅಕ್ರಮಗಳನ್ನು ಎಸಗಲಾಗಿದೆ ಎಂದು ತನಿಖಾ ಸಂಸ್ಥೆ ಪತ್ತೆಹಚ್ಚಿದೆ. ಇದೇ ವೇಳೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕೂಡ ಅನಿಲ್ ಅಂಬಾನಿ ಅವರ ಸಮೂಹದ ಕಂಪನಿಯಾದ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್ಕಾಮ್) ಮತ್ತು ಅನಿಲ್ ಅಂಬಾನಿ ವಂಚನೆ ಎಸಗಿರುವುದಾಗಿ ಹೇಳಿದ್ದು, ಈ ಸಂಬಂಧ ದೂರು ಸಲ್ಲಿಸಲೂ ಸಿದ್ಧತೆ ನಡೆಸಿದೆ.
ಹೀಗಿದ್ದೂ ಈ ದಾಳಿಗಳು ತಮ್ಮ ವ್ಯವಹಾರ, ಆರ್ಥಿಕ ಕಾರ್ಯಕ್ಷಮತೆ ಅಥವಾ ಷೇರುದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗಳು ಷೇರು ಮಾರುಕಟ್ಟೆಗಳಿಗೆ ಮಾಹಿತಿ ನೀಡಿವೆ.
