ಸಂಪಾದಕೀಯ || ಕುಡಿಯುವ ನೀರಿಗಾಗಿ ಮಹಾದಾಯಿ ರಾಜಕೀಯ ಲೆಕ್ಕಾಚಾರ ಅನಗತ್ಯ

ಕುಡಿಯುವ ನೀರಿಗಾಗಿ ಮಹಾದಾಯಿ ರಾಜಕೀಯ ಲೆಕ್ಕಾಚಾರ ಅನಗತ್ಯ

ಕುಡಿಯುವ ನೀರಿಗಾಗಿ ಮಹಾದಾಯಿ ರಾಜಕೀಯ ಲೆಕ್ಕಾಚಾರ ಅನಗತ್ಯ

ಉತ್ತರ ಕರ್ನಾಟಕದ ಹೆಚ್ಚಿನ ಭಾಗಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು ಅದಕ್ಕಾಗಿ ರೂಪಿಸಿದ ಮಹಾದಾಯಿ ಯೋಜನೆಯ ಅನುಷ್ಠಾನಕ್ಕೆ ರಾಜಕೀಯ ಲೆಕ್ಕಾಚಾರ ಹಾಕುತ್ತಿರುವುದು ವಿಷಾದಕರ ಸಂಗತಿ. ಮಹಾದಾಯಿ ಯೋಜನೆಯ ಭಾಗವಾದ ಬಂಡೂರಿ ನಾಲೆ ತಿರುವುಯೋಜನೆಗೆ 71ಎಕರೆ ಅರಣ್ಯ ಭೂಮಿ ಬಳಸುವುದಕ್ಕೆ ಸಂಬಂಧಿಸಿ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಎತ್ತಿದ ತಕರಾರು ಯೋಜನೆಯ ಮುಂದುವರಿಕೆಗೆ ಅಡ್ಡಿಯಾಗಿದೆ.

ಮಹಾದಾಯಿ ಯೋಜನೆಯ ಮೂಲಕ ಕುಡಿಯುವ ನೀರನ್ನು ಪೂರೈಸುವಂ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಜನರ ಪ್ರತಿಭಟನೆ ನಡೆದಿದೆ. ನರಗುಂದ, ನವಲಗುಂದ ಭಾಗದ ಜನತೆ ಎರಡು ವರ್ಷಗಳ ಹಿಂದೆ ಒಂದು ವರ್ಷ ಕಾಲ ಧರಣಿಯನ್ನು ನಡೆಸಿ ಯೋಜನೆಯ ಜಾರಿಗೆ ಒತ್ತಾಯಿಸಿದ್ದು ಕೇಂದ್ರ ಸರ್ಕಾರದ ಗಮನ ಸೆಳೆಯಲಿಲ್ಲ. ಜನರ ಅವಶ್ಯಕತೆಗಿಂತಲೂ ರಾಜಕೀಯ ಲೆಕ್ಕಾಚಾರವನ್ನು ಸರ್ಕಾರದ ಇಲಾಖೆಗಳೂ ಮುಂದು ಮಾಡುತ್ತಿರುವುದುದುರ ದೃಷ್ಟಕರ ಸಂಗತಿ.

ಮಹಾದಾಯಿ ಜಲವಿವಾದ ನ್ಯಾಯಮಂಡಲಿ 2018ರ ಆಗಸ್ಟ್ 18 ರಂದು ಕಳಸಾ ಬಂಡೂರಿಯೋಜನೆಗೆ 3.90 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಇದರಲ್ಲಿ ಬಂಡೂರಿ ನಾಲಾ ತಿರುವುಯೋಜನೆಗೆ 2.18 ಟಿಎಂಸಿ ಅಡಿ ನೀರು ನಿಗದಿಯಾಗಿದೆ.ಇದರ ಕಾಮಗಾರಿಗಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಮೂರು ಗ್ರಾಮಗಳಲ್ಲಿನ ಅರಣ್ಯ ಬಳಕೆಗೆ ಒಪ್ಪಿಗೆ ನೀಡಬೇಕಿದೆ.ಈ ಸಂಬಂಧದಲ್ಲಿ ಕರ್ನಾಟಕದ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ರ್ಕಾಯದರ್ಶಿಯವರು ಕಳಿಸಿದ ಪ್ರಸ್ತಾವನೆಯನ್ನು ಕೇಂದ್ರ ಅರಣ್ಯ, ಪರಿಸರ ಖಾತೆ ವಾಪಸು ಕಳಿಸಿರುವುದು ಯೋಜನೆಯ ವಿಳಂಬಕ್ಕೆ ಕಾರಣವಾಗಿದೆ. ಮಹಾದಾಯಿ ನದಿ ಮೂರು ವನ್ಯಜೀವಿ ಧಾಮಗಳು ಮತ್ತು ಒಂದು ಪಕ್ಷಧಾಮದ ಮೂಲಕ ಹಾದು ಹೋಗುತ್ತಿರುವುದರಿಂದ ನದಿ ತಿರುವುಯೋಜನೆ ಎತ್ತಿಕೊಂಡರೆ ವನ್ಯಜೀವಿ ಧಾಮಗಳಿಗೆ ಹಾನಿಯಾಗಲಿದೆ ಎಂಬ ಆಕ್ಷೇಪವನ್ನು ಗೋವಾ ಎತ್ತಿದೆ.

ಈ ಆಕ್ಷೇಪಕ್ಕೆ ಕರ್ನಾಟಕ ಸರ್ಕಾರ ಸ್ಥಳ ಪರೀಕ್ಷೆ ನಡೆಸಿದೆ. ಬಂಡೂರಿ ನಾಲಾ ತಿರುವು ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದ ಬೆಳಗಾವಿ ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸದರಿ ಪ್ರದೇಶದ ಸುತ್ತ ಹುಲಿ, ಚಿರತೆ, ಕರಡಿ, ಕಾಡುಕೋಣ, ಜಿಂಕೆ ಸೇರಿದಂತೆ ಅನೇಕ ಬಗೆಯಕಾಡು ಪ್ರಾಣಿಗಳು ಕಂಡು ಬಂದರೂ ಈ ಪ್ರದೇಶವು ರಾಷ್ಟ್ರೀಯ ಉದ್ಯಾನ, ವನ್ಯಜೀವಿ ಧಾಮ, ಹುಲಿ ಸಂರಕ್ಷಿತ ಪ್ರದೇಶ ಇಲ್ಲವೇ ಆನೆ ಕಾರಿಡಾರ್ನ ಭಾಗವಲ್ಲ ಎಂದು ಸಲ್ಲಿಸಿದ ವರದಿಯನ್ನು ಕೇಂದ್ರದ ಅರಣ್ಯ, ಪರಿಸರ ಇಲಾಖೆ ಪರಿಗಣಿಸಿಯೇ ಇಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅಧಿಸೂಚನೆ ಹೊರಡಿಸಿದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೂ ಈ ಜಾಗ ಬರುವುದಿಲ್ಲ. ಈ ಯೋಜನೆಯ ಜಾರಿಯಿಂದ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಉಲ್ಲಂಘನೆಯೂ ಆಗುವುದಿಲ್ಲ. ಕುಡಿಯುವ ನೀರಿನ ಈ ಯೋಜನೆಗಾಗಿ ಕನಿಷ್ಠ ಪ್ರಮಾಣದ ಅರಣ್ಯವನ್ನು ಬಳಸಿಕೊಳ್ಳಾಗುತ್ತಿದೆ ಎಂದು ನೀಡಿದ ಸ್ಪಷ್ಟನೆಯನ್ನೂ ಕೇಂದ್ರವು ಪರಿಗಣಿಸಿಲ್ಲ.

ಕರ್ನಾಟಕದ ಸಮಸ್ಯೆಗಳ ವಿಷಯದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ರಾಜಕೀಯ ಲಾಭದ ದೃಷ್ಟಿಯನ್ನೇ ಪ್ರಕಟಿಸುತ್ತಿದೆ ಎಂಬ ಆರೋಪಕ್ಕೆ ಎಡೆಕೊಟ್ಟಿರುವ ಈ ಸಮಸ್ಯೆಯನ್ನು ಬಗೆ ಹರಿಸುವಂತೆ ಒತ್ತಾಯಿಸಲು ಮತ್ತೆ ಪ್ರಯತ್ನ ನಡೆಸುವ ಸಲಹೆಯನ್ನು ಆಮ್ ಆದ್ಮಿ ಪಕ್ಷದರಾಜ್ಯದ ಮುಖಂಡರು ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ. ಮಹಾದಾಯಿ ನ್ಯಾಯಾಧಿ ಕರಣದಿಂದ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆಯಾಗಿದ್ದು ನೀರಿನ ಬಳಕೆಗಾಗಿ ಎರಡುಕಿರು ಅಣೆಕಟ್ಟೆಗಳ ನಿರ್ಮಾಣದ ಅವಶ್ಯಕತೆ ಇದೆ. ಕನಿಷ್ಠ ಪ್ರಮಾಣದ ಅರಣ್ಯ ಪ್ರದೇಶವನ್ನು ಈ ಯೋಜನೆಗೆ ಬಳಸಿಕೊಳ್ಳಲು ಕೇಂದ್ರದ ಅರಣ್ಯ ಇಲಾಖೆ ಮತ್ತು ಗೋವಾ ಸರ್ಕಾರಗಳು ಪರಿಸರದ ನೆಪವನ್ನು ಮುಂದು ಮಾಡಿ ಅಡ್ಡಿಪಡಿಸುತ್ತಿರುವುದನ್ನು ಜನತೆ ಗಮನಿಸಬೇಕಿದೆ.

ಕಳೆದ ಹತ್ತು ವರ್ಷಗಳಿಂದಲೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಗೋವಾದಲ್ಲಿಯೂ ಅದೇ ಪಕ್ಷದ ಸರ್ಕಾರ ಇದೆ. ಒಂದೂವರೆ ವರ್ಷದ ಹಿಂದೆ ಕರ್ನಾಟಕದಲ್ಲಿಯೂ ಬಿಜೆಪಿ ಪಕ್ಷದ ಸರ್ಕಾರವೇ ಇತ್ತು. ಮಹಾದಾಯಿ ಯೋಜನೆಗಾಗಿ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕದ ಜನತೆ ಒತ್ತಾಯಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಬಿಜೆಪಿಯ ಜನಪರ ಬದ್ಧತೆಯನ್ನು ಶಂಕಿಸುವಂತೆ ಮಾಡಿರುವ ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು, ರಾಜ್ಯದ ಜನರ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವುದಕ್ಕೆ ಎಲ್ಲ ರಾಜಕೀಯ ಪಕ್ಷಗಳ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಘಟಕದ ಅಧ್ಯಕ್ಷರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ.

Leave a Reply

Your email address will not be published. Required fields are marked *