ಬೆಂಗಳೂರು: ಹಬ್ಬಗಳು, ಸಾಲು – ಸಾಲು ರಜೆಗಳು ಬಂದರೆ ಕೆಲವು ಖಾಸಗಿ ಬಸ್‌ಗಳ ದರ ಏರಿಕೆಯಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಸಾಮಾನ್ಯವಾಗಿದೆ. ಇದೀಗ, ಗೌರಿ-ಗಣೇಶ ಹಬ್ಬಕ್ಕೂ ಇದು ತಪ್ಪಿಲ್ಲ. ಎರಡರಿಂದ ಮೂರು ಪಟ್ಟು ಹೆಚ್ಚು ಹಣ ನೀಡಿ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರು ರಾಜ್ಯದ ವಿವಿಧ ಭಾಗಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ಹಬ್ಬ ಹಾಗೂ ಲಾಂಗ್ ಹಾಲಿಡೇ ಸಂದರ್ಭಗಳಲ್ಲಿ ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ ಸೇವೆ ಕಲ್ಪಿಸುತ್ತದೆ. ಅದರಂತೆ ಈ ಬಾರಿಯೂ ಗೌರಿ-ಗಣೇಶ ಹಬ್ಬಕ್ಕೆ ಹೆಚ್ಚುವರಿಯಾಗಿ 1,500 ಬಸ್‌ಗಳ ಸೇವೆ ಒದಗಿಸುತ್ತಿದೆ. ಆದರೂ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ತೆರಳಲು ಹೆಚ್ಚಿನ ಪ್ರಯಾಣಿಕರು ಮುಂದಾಗುವ ಕಾರಣದಿಂದಾಗಿ ಖಾಸಗಿ ಬಸ್‌ಗಳ ಕಡೆ ಮುಖ ಮಾಡುವುದು ಅನಿವಾರ್ಯವಾಗಿದೆ.
ಗೌರಿ ಹಬ್ಬ, ,ಗಣೇಶನ ಹಬ್ಬ ಭಾನುವಾರ ಎಂದಿನಂತೆ ರಜೆ ಇದೆ. ಹೀಗಾಗಿ, ಕುಟುಂಬ ಸಮೇತರಾಗಿ ತಮ್ಮ ತಮ್ಮ ಊರುಗಳಿಗೆ ತೆರಳಲು ಜನರು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಪ್ರಯಾಣ ದರ ಶಾಕ್ ನೀಡಿದೆ. ಆದರೂ ಅನಿವಾರ್ಯವಾಗಿ ದುಪ್ಪಟ್ಟು ಹಣ ನೀಡಿ, ಜನರು ಖಾಸಗಿ ಬಸ್ಗಳಲ್ಲಿ ಪ್ರಯಾಣಿಸುವಂತಾಗಿದೆ.
ಕೆಎಸ್ಆರ್ಟಿಸಿ ಬಸ್ನಲ್ಲೂ ಗೌರಿ-ಗಣೇಶ ಹಬ್ಬಕ್ಕೆ ದರ ಏರಿಕೆ ಮಾಡಲಾಗಿದೆ. ನಾವು 300 ರಿಂದ 400 ರೂ.ಗಳಷ್ಟು ದರ ಏರಿಕೆ ಮಾಡಿದ್ದೇವೆ ಎಂದು ಪ್ರಯಾಣಿಕರಿಗೆ ಕೆಲ ಖಾಸಗಿ ಬಸ್ನವರು ಸಮಜಾಯಿಷಿ ನೀಡುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳುವ ಸಾರಿಗೆ ಇಲಾಖೆ, ಬೆರಳೆಣಿಕೆಯಷ್ಟೇ ಖಾಸಗಿ ಬಸ್‌ಗಳಿಗೆ ದಂಡ ವಿಧಿಸಿ ಕೈತೊಳೆದುಕೊಳ್ಳುತ್ತಿದೆ. ಇದರಿಂದಾಗಿ ಪ್ರತಿ ವರ್ಷವೂ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಿಸುವುದು ಮುಂದುವರೆದಿದೆ
ಖಾಸಗಿ ಬಸ್‌ಗಳ ಟಿಕೆಟ್ ದರ: ಗೌರಿ ಗಣೇಶ್ ಹಬ್ಬಕ್ಕೂ ಮೊದಲು ಬೆಂಗಳೂರು – ಹಾವೇರಿಗೆ 600-1,200 ರೂ., ಬೆಂಗಳೂರು-ಕಲಬುರಗಿಗೆ 600-1,200 ರೂ., ಬೆಂಗಳೂರು-ಯಾದಗಿರಿಗೆ 600-1,400 ರೂ., ಬೆಂಗಳೂರು – ದಾವಣಗೆರೆಗೆ 550-900 ರೂ. ಬೆಂಗಳೂರು-ಹಾಸನಕ್ಕೆ 475-700 ರೂ., ಬೆಂಗಳೂರು-ಧಾರವಾಡಕ್ಕೆ 700-1,650 ರೂ. ಹಾಗೂ ಬೆಂಗಳೂರು-ಚಿಕ್ಕಮಗಳೂರಿಗೆ 600-1,000 ರೂ.ಗಳಷ್ಟಿತ್ತು. ಆದರೆ, ಸೆ. 6ರಂದು ಆ ದರ ಶೇ. 50ರಷ್ಟು ಹೆಚ್ಚಾಗಿ ಬೆಂಗಳೂರು – ಹಾವೇರಿಗೆ 1,550-1,600 ರೂ., ಬೆಂಗಳೂರು-ಕಲಬುರಗಿಗೆ 1,200-2,000 ರೂ., ಬೆಂಗಳೂರು – ಯಾದಗಿರಿಗೆ 1,100-1,900 ರೂ., ಬೆಂಗಳೂರು-ದಾವಣಗೆರೆಗೆ 900-1,800 ರೂ., ಬೆಂಗಳೂರು-ಹಾಸನಕ್ಕೆ 800-1,700 ರೂ., ಬೆಂಗಳೂರು-ಧಾರವಾಡಕ್ಕೆ 1,500-2,500 ರೂ. ಹಾಗೂ ಬೆಂಗಳೂರು-ಚಿಕ್ಕಮಗಳೂರಿಗೆ 900-1,400 ರೂ.ಕ್ಕೆ ಏರಿಕೆಯಾಗಿದೆ.