ಬೆಂಗಳೂರು,: ಎಲೆಕ್ಟ್ರಿಕ್ ವಾಹನ ಹೊಂದಿರುವ ಬೆಂಗಳೂರು ನಗರದ ಜನರಿಗೆ ಬೆಸ್ಕಾಂ ಸಿಹಿಸುದ್ದಿ ನೀಡಿದೆ. ನಗರದಲ್ಲಿ 20 ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಷನ್ ನಿರ್ಮಾಣವಾಗಲಿದ್ದು, ಬ್ಯಾಟರಿ ಚಾರ್ಜ್ ಆಗುವ ತನಕ ಸವಾರರು ಕಾಯುವುದು ತಪ್ಪಲಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಇದರ ಭಾಗವಾಗಿಯೇ ಮೊದಲು ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಿತ್ತು. ಈಗ ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಷನ್ ನಿರ್ಮಿಸುತ್ತಿದೆ.
ಬೆಸ್ಕಾಂ ಅಧಿಕಾರಿಗಳು ಮಾತನಾಡಿ, ಹೊಸ ಹೊಸ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರುತ್ತಿವೆ. ಇವು ಬ್ಯಾಟರಿ ಸ್ವ್ಯಾಪಿಂಗ್ ತಂತ್ರಜ್ಞಾನವನ್ನು ಹೊಂದಿವೆ. ಇದುವರೆಗೂ ನಾವು ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಮಾಡಿದ್ದೆವು. ಈಗ ಮೊದಲ ಬಾರಿಗೆ ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಷನ್ ನಿರ್ಮಾಣ ಮಾಡುತ್ತಿದ್ದೇವೆ ಎಂದು ಹೇಳಿದರು.
ಹೇಗಿರಲಿದೆ ಸ್ಟೇಷನ್?: ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಷನ್ ನಿರ್ಮಾಣವಾಗಲಿದೆ. ಬೆಸ್ಕಾಂ ತನ್ನ ಸಬ್ ಡಿವಿಷನ್ ಕಛೇರಿಯಲ್ಲಿ ಇದಕ್ಕಾಗಿ ಭೂಮಿ ನೀಡಲಿದೆ. ಸ್ಟೇಷನ್ ನಿರ್ಮಾಣ ಮಾಡಲಿದೆ. ಬರುವ ಆದಾಯವನ್ನು ಬೆಸ್ಕಾಂ ಜೊತೆ ಹಂಚಿಕೊಳ್ಳಲಿದೆ.
ತಜ್ಞರ ಪ್ರಕಾರ ಈಗ ಮಾರುಕಟ್ಟೆಗೆ ಬರುತ್ತಿರುವ ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿ ಸ್ವ್ಯಾಪಿಂಗ್ ತಂತ್ರಜ್ಞಾನ ಹೆಚ್ಚು ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ 2 ಮತ್ತು 3 ಚಕ್ರದ ವಾಹನಗಳಲ್ಲಿ ಈ ತಂತ್ರಜ್ಞಾನ ಹೆಚ್ಚು ಬಳಕೆಯಾಗುತ್ತಿದೆ. ಆದ್ದರಿಂದ ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಷನ್ ನಿರ್ಮಾಣ ಅಗತ್ಯವಾಗಿದೆ.
ಬೆಂಗಳೂರು ನಗರದಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಷನ್ ಕೆಲವು ಮಾತ್ರ ಇದ್ದು, ಇವುಗಳನ್ನು ಕಾರು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಖಾಸಗಿ ಕಂಪನಿಗಳು ತೆರೆದಿವೆ. ಬೆಸ್ಕಾಂ ಇಂತಹ ಕೇಂದ್ರ ತೆರೆದರೆ ಅನುಕೂಲವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.
ಎಲೆಕ್ಟ್ರಿಕ್ ವಾಹನ ಸವಾರರಿಗೆ ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಷನ್ ನಿರ್ಮಾಣದಿಂದ ಅನುಕೂಲವಾಗಲಿದೆ. ಬೆಸ್ಕಾಂ ವಾಹನ ಸವಾರರು ತಮ್ಮ ಸಮೀಪದಲ್ಲಿ ಎಲ್ಲಿ ಸ್ಟೇಷನ್ ಇದೆ? ಎಂಬುದನ್ನು ತಿಳಿಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಸದ್ಯದ ಮಾಹಿತಿ ಪ್ರಕಾರ ಬೆಸ್ಕಾಂ ತನ್ನ ವಿಭಾಗೀಯ ಕಛೇರಿ ಇರುವ ವಿಧಾನಸೌಧ, ಇಂದಿರಾನಗರ, ಶಿವಾಜಿನಗರ ಮತ್ತು ಇತರ ಸ್ಥಳಗಳಲ್ಲಿ ಮೊದಲ ಹಂತದಲ್ಲಿ 20 ಬ್ಯಾಟರಿ ಸ್ವ್ಯಾಪಿಂಗ್ ಸ್ಟೇಷನ್ ನಿರ್ಮಾಣ ಮಾಡಲಿದೆ.