ಬೆಂಗಳೂರು: ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ವಿಧೇಯಕ ಮಂಡನೆಗೆ ಒಪ್ಪಿಗೆ ಕೊಡಲಾಗಿದೆ.
‘ದಿ ಕರ್ನಾಟಕ ಸ್ಟೇಟ್ ಎಂಪ್ಲಾಯ್ಮೆಂಟ್ ಆಫ್ ಲೋಕಲ್ ಕ್ಯಾಡಿಡೇಟ್ಸ್ ಇನ್ ದಿ ಇಂಡಸ್ಟ್ರೀಸ್, ಫ್ಯಾಕ್ಟರೀಸ್ ಆ್ಯಂಡ್ ಲೋಕಲ್ ಎಷ್ಟಾಬ್ಲಿಷ್ಮೆಂಟ್ ಬಿಲ್-2024 ವಿಧೇಯಕದಂತೆ ಮ್ಯಾನೇಜ್ಮೆಂಟ್ ಹುದ್ದೆಗಳು ಶೇ.50 ಹಾಗೂ ನಾನ್ ಮ್ಯಾನೇಜ್ಮೆಂಟ್ ಶೇ.75ರಷ್ಟು ಹುದ್ದೆಗಳು ಸ್ಥಳೀಯರಿಗೆ ಮೀಸಲಿಡಲಾಗುತ್ತದೆ.
ಕರ್ನಾಟಕದಲ್ಲಿಯೇ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷದಿಂದ ವಾಸಿಸುತ್ತಿರುವವರು, ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರುವವರು, ನೋಡಲ್ ಏಜೆನ್ಸಿ ನಡೆಸುವ ಕನ್ನಡ ಕುರಿತು ಪರೀಕ್ಷೆಯಲ್ಲಿ ಪಾಸಾದವರನ್ನು ಸ್ಥಳೀಯರು ಎಂದು ಪರಿಗಣಿಸಲಾಗುವುದು. ಮ್ಯಾನೇಜ್ಮೆಂಟ್ನಲ್ಲಿ ಸೂಪರ್ವೈಸರ್, ಮ್ಯಾನೇಜಿರಿಯಲ್, ಟೆಕ್ನಿಕಲ್, ಆಪರೇಷನಲ್, ಆಡಳಿತ ಸೇರಿ ಉನ್ನತ ಹುದ್ದೆಗಳಲ್ಲಿ ಶೇ.50 ಉದ್ಯೋಗ ಸ್ಥಳೀಯರಿಗೆ ಮೀಸಲಿಡಲಾಗುವುದು. ಇನ್ನು ನಾನ್-ಮ್ಯಾನೇಜ್ಮೆಂಟ್ನಲ್ಲಿ ಕ್ಲರ್ಕ್ಗಳು, ಕೌಶಲ, ಕೌಶಲ ರಹಿತ ಹಾಗೂ ಅರೆಕೌಶಲ, ಗುತ್ತಿಗೆ ನೌಕರ ಹಾಗೂ ಐಟಿ ಹುದ್ದೆಗಳಲ್ಲಿ ಶೇ.75 ಮೀಸಲು ಸ್ಥಳೀಯರಿಗೆ ನೀಡುವ ವಿಧೇಯಕ ಇದಾಗಿದೆ.
ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ದಂಡ ವಿಧಿಸುವ ಅಂಶವನ್ನೂ ವಿಧೇಯಕದಲ್ಲಿ ಸೇರಿಸಲಾಗಿದೆ. ಕನಿಷ್ಠ 10 ಸಾವಿರ ರೂ. ಹಾಗೂ 25 ಸಾವಿರ ರೂ.ಗಳ ವರೆಗೆ ದಂಡ ವಿಸ್ತರಣೆ ಮಾಡಲು ಅವಕಾಶ ನೀಡಲಾಗುತ್ತದೆ. ಆ ನಂತರವೂ ಉದ್ಯೋಗ ನೀಡದೇ ಹೋದರೆ ದಿನಕ್ಕೆ 100 ರೂ. ದಂಡ ವಿಧಿಸಲಾಗುತ್ತದೆ.