Engineering ಸೀಟ್ ಬ್ಲಾಕಿಂಗ್ ಹಗರಣ: ರಾಜ್ಯದ ವಿವಿಧೆಡೆ E.D ಶೋಧ

ED

ED

ಬೆಂಗಳೂರು: ಇಂಜಿನಿಯರಿಂಗ್​​ ಸೀಟ್​​​​ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಇಂದು ರಾಜ್ಯದ ವಿವಿಧೆಡೆ ದಾಳಿ ನಡೆಸಿದ್ದಾರೆ.

ಬೆಂಗಳೂರು ಸೇರಿದಂತೆ 18 ಕಡೆಗಳಲ್ಲಿ ಇಂಜಿನಿಯರಿಂಗ್​ ಕಾಲೇಜುಗಳು, ಕಾಲೇಜು ಆಡಳಿತ ಮಂಡಳಿ ಸದಸ್ಯರ ಮನೆಗಳಲ್ಲಿ ಪರಿಶೀಲನೆ ನಡೆಯುತ್ತಿದೆ.

ಪ್ರತಿಷ್ಠಿತ ಇಂಜಿನಿಯರಿಂಗ್​​ ಕಾಲೇಜ್‌ಗಳಲ್ಲಿ ಸೀಟ್‌ಗಳನ್ನು ಬ್ಲಾಕ್​​ ಮಾಡಿ ಅಕ್ರಮವಾಗಿ ಹಂಚಿಕೆ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಕಳೆದ ವರ್ಷ ಮಲ್ಲೇಶ್ವರಂನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕಿಂಗ್ ಪಿನ್ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು.

ಏನಿದು ಹಗರಣ?: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ನೌಕರನ ಸಹಾಯದಿಂದ ಪಡೆದ ಪಾಸ್‌ವರ್ಡ್‌ ಬಳಸಿ, ಸರ್ಕಾರಿ ಸೀಟ್ ಪಡೆದು ಕಾಲೇಜ್ ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಸೀಟ್‌ಗಳನ್ನು ಆರೋಪಿಗಳು ಬ್ಲಾಕ್ ಮಾಡುತ್ತಿದ್ದರು. ಆ ಸೀಟ್‌ಗಳನ್ನು ಲಕ್ಷಾಂತರ ರೂಪಾಯಿಗೆ ಮ್ಯಾನೇಜ್‌ಮೆಂಟ್ ಕೋಟಾದಡಿ ಬೇರೆಯವರಿಗೆ ಡೀಲ್​ ಮಾಡುತ್ತಿದ್ದರು.

ಕಾಲೇಜಿನ ಮ್ಯಾನೇಜ್‌ಮೆಂಟ್​​ ಹಾಗೂ ಮಧ್ಯವರ್ತಿಗಳ ಸಹಾಯದಿಂದಲೇ ಈ ಡೀಲ್​ ನಡೆಯುತ್ತಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೌನ್ಸೆಲಿಂಗ್‌ಗೆ ಹಾಜರಾಗಿ ಕಾಲೇಜ್ ಆಯ್ಕೆಯಾಗದೇ ಇರುವವರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು.

ಡೀಲ್‌ನಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾದ ಶಂಕೆಯಿರುವ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಪ್ರತ್ಯೇಕವಾಗಿ ತನಿಖೆ ಆರಂಭಿಸಿದ್ದರು.

Leave a Reply

Your email address will not be published. Required fields are marked *