Microsoft ಸರ್ವರ್​ನಲ್ಲಿ ದೋಷ : ಇಡೀ ಜಗತ್ತಿಗೆ ತಾಂತ್ರಿಕ ಬಿಕ್ಕಟ್ಟು

ನವದೆಹಲಿ: ಮೈಕ್ರೋಸಾಫ್ಟ್‌ ಸರ್ವರ್‌ಗಳಲ್ಲಿನ ದೋಷದಿಂದಾಗಿ ಜಾಗತಿಕವಾಗಿ ತಾಂತ್ರಿಕ ಬಿಕ್ಕಟ್ಟು ತಲೆದೋರಿದೆ. ಈ ಸಮಸ್ಯೆ ಮೊದಲು ಅಮೆರಿಕದ ಫ್ರಾಂಟಿಯರ್ ಏರ್‌ಲೈನ್ಸ್‌ನಲ್ಲಿ ಉಂಟಾಗಿದ್ದು, ಕ್ರಮೇಣ ಪ್ರಪಂಚದಾದ್ಯಂತ ಹರಡಿದೆ. ದೆಹಲಿ, ಮುಂಬೈ ಸೇರಿದಂತೆ ಹಲವು ದೇಶದ ವಿಮಾನ ಸೇವೆಗಳಿಗೂ ಅಡಚಣೆಯಾಗಿದೆ.

ಕ್ಲೌಡ್ ಸ್ಟ್ರೈಕ್ ಆ್ಯಂಟಿ-ವೈರಸ್ ನವೀಕರಿಸಬೇಕಾಗಿತ್ತು. ಕಂಪನಿ ಸಮಯಕ್ಕೆ ಸರಿಯಾಗಿ ಅಪ್​ಡೇಟ್​ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಜಗತ್ತು ಈ ಐಟಿ ಬಿಕ್ಕಟ್ಟು ಉದ್ಭವಿಸಿದೆ ಎಂದು ಮೈಕ್ರೋಸಾಫ್ಟ್-ಸಂಯೋಜಿತ ಸೈಬರ್ ಸೆಕ್ಯುರಿಟಿ ಸಂಸ್ಥೆ ತಿಳಿಸಿದೆ.

ಹೊಸ CrowdStrike ಅಪ್‌ಡೇಟ್‌ನಿಂದಾಗಿ Windows 10 ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಂಡೋಸ್‌ನ ಇತ್ತೀಚಿನ ಐಟಿ ಸಮಸ್ಯೆಯಿಂದ ಕೆಲವು ಮೈಕ್ರೋಸಾಫ್ಟ್ ಸೇವೆಗಳಿಗೂ ಭಾರೀ ಅಡಚಣೆ ಉಂಟಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಮೈಕ್ರೋಸಾಫ್ಟ್ ತನ್ನ ಮೊದಲ ಹೇಳಿಕೆ ಬಿಡುಗಡೆ ಮಾಡಿದ್ದು, “ನಮ್ಮ ತಜ್ಞರು ಸಾಧ್ಯವಾದಷ್ಟು ಬೇಗ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ಶೀಘ್ರದಲ್ಲೇ ಹೆಚ್ಚಿನ ಅಪ್​ಡೇಟ್​ಒದಗಿಸುತ್ತಾರೆ” ಎಂದಿದೆ.

ಮೈಕ್ರೋಸಾಫ್ಟ್‌ ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಮುಖ ಬ್ಯಾಂಕ್‌ಗಳು, ಮಾಧ್ಯಮಗಳು ಮತ್ತು ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಗೆ ತೊಂದರೆಯಾಗಿದೆ. ಮುಂಬೈ ಷೇರು ಮಾರುಕಟ್ಟೆ, ಲಂಡನ್ ಷೇರು ಮಾರುಕಟ್ಟೆ ಸೇವೆಗಳು ಅಸ್ತವ್ಯಸ್ತಗೊಂಡಿವೆ.

ದೆಹಲಿ ವಿಮಾನ ನಿಲ್ದಾಣ ಕೂಡಾ ಸರ್ವರ್ ಅಸಮರ್ಪಕ ಕಾರ್ಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದೆ. ಐಟಿ ಬಿಕ್ಕಟ್ಟಿನಿಂದಾಗಿ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿದ್ದು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *