ಪೆಟ್ರೋಲ್​, ಡಿಸೇಲ್​ ಖಾಲಿ ಅಂತಾ ವಾಹನ ರಸ್ತೆಯಲ್ಲಿ ನಿಲ್ಲಿಸಿದ್ರೂ ಬೀಳುತ್ತೆ ಕೇಸ್

ಬೆಂಗಳೂರು : ಕುಡಿದು ವಾಹನ ಚಲಾಯಿಸಿದರೆ ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಸಂಚಾರ ಪೊಲೀಸರ ನಿರಂತರ ಜಾಗೃತಿ ಹಾಗೂ ದಂಡದ ಬಿಸಿಗೆ ಮಣಿದಿರುವ ವಾಹನ ಸವಾರರು ಪಾನಮತ್ತ ಚಾಲನೆ ಮಾಡದೆ ಸಂಚಾರ ನಿಯಮ ಪಾಲಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜನವರಿಯಿಂದ ಇದುವರೆಗೂ ಪಾನಮತ್ತ ಚಾಲನೆ ಮಾಡಿ ಸಿಕ್ಕಿಬೀಳುವವರ ಸಂಖ್ಯೆ ಶೇ. 2.6ರಷ್ಟು ಇಳಿಕೆಯಾಗಿದೆ. 2023ರಲ್ಲಿ 4.6 ರಷ್ಟಿತ್ತು. ಇದರಲ್ಲಿ ದ್ವಿಚಕ್ರ ವಾಹನ ಸವಾರರ ಪ್ರಮಾಣ ಕಳೆದ‌ ವರ್ಷ 5.2 ರಷ್ಟಿದ್ದರೆ, ಈ ವರ್ಷದ ಶೇ. 3.2 ರಷ್ಟು ಕಡಿಮೆಯಾಗಿದೆ.

ಇನ್ನು ಮದ್ಯಸೇವನೆ ಮಾಡಿ ಅಪಘಾತಕ್ಕೀಡಾಗುತ್ತಿದ್ದವರ ಪ್ರಮಾಣದಲ್ಲಿ ಈ ಬಾರಿ ತುಸು ಇಳಿಕೆಯಾಗಿದೆ. 2023 ರಲ್ಲಿ 4.5ರಷ್ಟಿದ್ದ ಪ್ರಮಾಣ ಈ‌ ವರ್ಷ 4.3ಕ್ಕೆ ಇಳಿದಿದೆ. ಈ ವರ್ಷ ನಡೆಸಿದ 1.56 ಲಕ್ಷ ಡ್ರಂಕ್ ಅಂಡ್ ಡ್ರೈವ್ ತಪಾಸಣೆಯಲ್ಲಿ 4088 ಮಂದಿ ಸವಾರರು ಪಾನಮತ್ತರಾಗಿದ್ದರು ಎಂದು ಅಂಕಿ -ಅಂಶ ಸಮೇತ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ. ಎನ್ ಅನುಚೇತ್ ಮಾಹಿತಿ ನೀಡಿದ್ದಾರೆ.‌

ಈ ವರ್ಷದ ಮೊದಲ‌ ಮೂರು ತಿಂಗಳಲ್ಲಿ ಅಪಘಾತ ಪ್ರಕರಣ ಸಂಖ್ಯೆ ಹೆಚ್ಚಾಗಿದ್ದರೆ, ನಂತರ‌ ಎರಡು ತಿಂಗಳಲ್ಲಿ‌ ಆಕ್ಸಿಡೆಂಟ್ ಕೇಸ್​ಗಳು ಕಡಿಮೆಯಾಗಿವೆ. ಹೆಚ್ಚೆಚ್ಚು ಅಪಘಾತವಾಗುವ 63 ಬ್ಲಾಕ್ ಸ್ಪಾಟ್​ಗಳನ್ನ ಗುರುತಿಸಲಾಗಿದ್ದು, ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಮದ್ಯ ಸೇವಿಸಿ ಸ್ವಯಂಪ್ರೇರಿತವಾಗಿ ಅಪಘಾತ ಮಾಡಿಕೊಂಡಿರುವವರ ಸಂಖ್ಯೆ ಅಧಿಕವಾಗಿದೆ‌‌.‌ ಈ ಪೈಕಿ ಬೈಕ್ ಸವಾರರೇ ಹೆಚ್ಚಿದ್ದಾರೆ. ಈ ವರ್ಷದಲ್ಲಿ ದಾಖಲಾಗಿದ್ದ, 15 ಆಕ್ಸಿಡೆಂಟ್ ಪ್ರಕರಣಗಳಲ್ಲಿ 11 ಮಂದಿ ವಾಹನ ಸವಾರರು ಪಾನಮತ್ತರಾಗಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣರಾಗಿದ್ದಾರೆ.

ಕಳೆದ ವರ್ಷ ಕುಡಿದು ವಾಹನ ಚಾಲನೆ‌ ಮಾಡಿದ್ದ 21 ಪ್ರಕರಣ ದಾಖಲಾದ ಪೈಕಿ 10 ಪ್ರಕರಣಗಳಲ್ಲಿ ಬೇರೆ ವಾಹನಗಳಿಗೆ ಆಕ್ಸಿಡೆಂಟ್ ಮಾಡಿದರೆ, ಇನ್ನುಳಿದ 11 ಪ್ರಕರಣಗಳಲ್ಲಿ ಸೆಲ್ಫ್ ಆಕ್ಸಿಡೆಂಟ್ ಆಗಿವೆ ಎಂದು ಅನುಚೇತ್ ಅವರು ತಿಳಿಸಿದರು.

ಪೆಟ್ರೋಲ್- ಡೀಸೆಲ್ ಇಲ್ಲವೆಂದು ವಾಹನ ನಿಲ್ಲಿಸಿದರೆ ಕೇಸ್ ಬೀಳಲಿದೆ. ನಡುರಸ್ತೆಯಲ್ಲಿ ಇಂಧನ ಖಾಲಿಯಾಗಿದೆ ಎಂದು ವಾಹನ ನಿಲ್ಲಿಸುವ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 283ರಡಿ ಪ್ರಕರಣ ದಾಖಲಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *