ಕುತೂಹಲ ಮೂಡಿಸಿದ ಮಾಜಿ ಸಚಿವ ಸೋಮಣ್ಣ ನಡೆ | ಕಾಲು ಹೊರಗಿಟ್ಟು ಡಿಸೆಂಬರ್ 7 ರವರೆಗೆ ಕಾಯುತ್ತಿರುವುದೇಕೆ..?

ತುಮಕೂರು: ಎರಡೂ ಕಡೆ ಸ್ಪರ್ಧಿಸುವಂತೆ ಯಾರಿಂದ ಒತ್ತಡ ಬಂದಿತ್ತು ಎಂಬುದನ್ನು ಬಹಿರಂಗ ಪಡಿಸುವ ಮೂಲಕ ಮಾಜಿ ಸಚಿವ ವಿ.ಸೋಮಣ್ಣ ತಮ್ಮ ಅಸಮಧಾನದ ಆಸ್ಪೋಟವನ್ನು ಹೊರಹಾಕಿದ್ದಾರೆ. ಅಮಿತ್ ಷಾ ಹಾಗೂ ಪ್ರಧಾನಿ ಮೋದಿ ಅವರ ಹೆಸರನ್ನೇ ನೇರವಾಗಿ ಪ್ರಸ್ತಾಪಿಸುವ ಮೂಲಕ ತನಗಾದ ಅನ್ಯಾಯವನ್ನು ಹೊರಹಾಕಿದ್ದಾರೆ.

 ವಿಧಾನಸಭಾ ಚುನಾವಣೆಯಲ್ಲಿ ಸೋತ ದಿನದಿಂದ ಬಿಜೆಪಿ ಮುಖಂಡರುಗಳ ವಿರುದ್ಧ ಅಸಮಾಧಾನ ಹೊರ ಹಾಕುತ್ತಲೇ ಬಂದಿದ್ದ ವಿ.ಸೋಮಣ್ಣ ಅವರು ಮುಂದೆ ಎಲ್ಲವನ್ನೂ  ಬಹಿರಂಗಪಡಿಸುತ್ತೇನೆ ಎಂದು ಹೇಳುತ್ತಲೇ ಬಂದಿದ್ದರು. ತಮ್ಮ ಆಪ್ತರ ಬಳಿ ಅಷ್ಟೇ ಅಲ್ಲದೆ ಬಹಿರಂಗ ಸಭೆ, ಸಮಾರಂಭಗಳಲ್ಲಿಯೂ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದರು.

   ಮುಂಬರುವ ದಿನಗಳಲ್ಲಿ ಉತ್ತಮ ಸ್ಥಾನಮಾನಗಳು ಸಿಗಬಹುದು ಎಂಬ ಎಣಿಕೆಯಲ್ಲಿಯೇ ಇದ್ದ ಸೋಮಣ್ಣ ಅವರಿಗೆ ಅಂತಹ ಅವಕಾಶಗಳ ನಿರೀಕ್ಷೆಗಳು ಕಾಣಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ನಾನೂ ಆಕಾಂಕ್ಷಿ ಎಂದು ಹೇಳುತ್ತಿದ್ದರು. ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಘೋಷಣೆಯಾದ ನಂತರ ತಮ್ಮ ಅಸಮಾಧಾನದ ಮಾತುಗಳು ಮತ್ತಷ್ಟು ಸ್ಫೋಟಗೊಂಡವು. ಇದೀಗ ಅವರು ಬಿಜೆಪಿಯೊಳಗೆ ತುತ್ತ ತುದಿಯಲ್ಲಿ ನಿಂತಿರುವ0ತೆ ಕಾಣಿಸುತ್ತಿದೆ. ಪಕ್ಷದಿಂದ ಒಂದು ಕಾಲು ಹೊರಗಿಟ್ಟವಂತೆಯೇ ಇವೆ ಅವರ ಮಾತುಗಳು.

ಈವರೆಗೆ ಬಹಿರಂಗವಾಗಿ ಹೇಳಿಕೊಳ್ಳಲಾಗದ ಕೆಲವು ಸಂಗತಿಗಳನ್ನು ಸಿದ್ಧಗಂಗಾ ಕ್ಷೇತ್ರದಲ್ಲಿ ಶ್ರೀಗಳ ಮುಂದೆ ಹೊರ ಹಾಕಿದ್ದಾರೆ. ಅಮಿತ್ ಷಾ ಅವರೆ ನನ್ನ ಮನೆಗೆ ಬಂದು ಎರಡೂ ಕಡೆ ಚುನಾವಣೆಗೆ ನಿಲ್ಲಬೇಕು ಎಂದು ತಾಕೀತು ಮಾಡಿದರು. ಎರಡು ಗಂಟೆ ನನ್ನ ಮನೆಯಲ್ಲಿ ಕುಳಿತು ಜೀವ ತೆಗೆದರು. ಆನಂತರ ಪ್ರಧಾನಿ ಮೋದಿಯವರು ದೆಹಲಿಗೆ ಕರೆಯಿಸಿಕೊಂಡು ನೀನು ಸ್ಪರ್ಧೆ ಮಾಡಬೇಕು ಎಂದು ತಿಳಿಸಿದರು. ಹೀಗೆ ಇಬ್ಬರೂ ಒತ್ತಾಯಿಸಿದಾಗ ನಾನು ಸ್ಪರ್ಧೆ ಮಾಡದೆ ಬೇರೆ ದಾರಿಯೇ ಇರಲಿಲ್ಲ. ಎಂದು ಹೇಳಿಕೊಂಡಿದ್ದಾರೆ. ಈವರೆಗೆ ಯಾರ ವಿರುದ್ದ ಅಸಮಧಾನದ ಮಾತುಗಳನ್ನಾಡುತ್ತಿದ್ದರು ಎಂಬುದೀಗ ಅವರ ಮಾತುಗಳಿಂದಲೇ ಬಹಿರಂಗವಾಗಿದೆ.

ತಮ್ಮ ಮುಂದಿನ ನಡೆಯನ್ನು ಡಿ.6ರ ನಂತರ ಹೇಳುವುದಾಗಿ ಸೂಚ್ಯವಾಗಿ ತಿಳಿಸಿರುವ ಹಿಂದೆ ಹಲವು ಲೆಕ್ಕಾಚಾರಗಳಿರುವಂತೆ ಕಂಡುಬರುತ್ತಿದೆ. ಡಿ.7ರಂದು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. ಇವರು ಒಬ್ಬರೇ ಹೋಗುತ್ತಿಲ್ಲ. ಬಿಜೆಪಿಯೊಳಗೆ ಅಸಮಾಧಾನಿತರಾಗಿರುವ ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಲಿಂಬಾವಳಿ, ರಮೇಶ್ ಜಾರಕಿ ಹೊಳಿ ಅವರೊಂದಿಗೆ ತೆರಳುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.

ತಾನು ಪ್ರೀತಿಸುತ್ತಾ ಬಂದಿದ್ದ ಗೋವಿಂದರಾಜ ನಗರ ಕ್ಷೇತ್ರವನ್ನು ಬಿಟ್ಟು ಹೊರಗೆ ಹೋಗಲು ಸೋಮಣ್ಣ ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಚಾಮರಾಜನಗರ ಒಂದನ್ನೇ ಆಯ್ಕೆ ಮಾಡಿಕೊಟ್ಟಿದ್ದರೆ ಅಷ್ಟೊಂದು ನೋವು ಉಂಟಾಗುತ್ತಿರಲಿಲ್ಲವೇನೋ. ಅದರ ಜೊತೆಗೆ ವರುಣಾ ಕ್ಷೇತ್ರದಿಂದಲೂ ಸ್ಪರ್ಧಿಸುವಂತೆ ಮಾಡಿದ ಒತ್ತಾಯವೇ ಸೋಮಣ್ಣ ಅವರಲ್ಲಿ ಅಸಹನೆ ಉಂಟು ಮಾಡಲು ಕಾರಣವಾಗಿದೆ. ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ ಇಂತಹ ಸ್ಥಿತಿಗೆ ಬಂದುಬಿಟ್ಟೆ ಎಂಬ ಮನದಾಳದ ನೋವು ಅವರಲ್ಲಿ ಬಾಧಿಸುತ್ತಿದೆ. ಇದಕ್ಕೆ ಕಾರಣರಾದ ಅಮಿತ್ ಷಾ ಮತ್ತು ನರೇಂದ್ರ ಮೋದಿ ಅವರನ್ನೇ ಈಗ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿ.ಸೋಮಣ್ಣ ಅವರ ಹೇಳಿಕೆಗಳು ಮತ್ತು ಅವರ ರಾಜಕೀಯ ನಡೆ ನುಡಿಗಳು ತೀವ್ರ ಕುತೂಹಲ ಮೂಡಿಸುತ್ತಲೇ ಬಂದಿವೆ. ತುಮಕೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಜಿ.ಎಸ್.ಬಸವರಾಜು ನಾನು ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾಗಿದೆ. ಅಷ್ಟೇ ಅಲ್ಲ, ಸೋಮಣ್ಣ ಬರುವುದಾದರೆ ಸ್ವಾಗತ ಎಂಬುದನ್ನೂ ಉಲ್ಲೇಖಿಸಿದ್ದಾರೆ. ತುಮಕೂರಿನಲ್ಲಿ ನಡೆದ ವೀರಶೈವ -ಲಿಂಗಾಯಿತ ಸಮುದಾಯದ ಸಭೆಯಲ್ಲಿ ಬಹಿರಂಗವಾಗಿಯೇ ಸೋಮಣ್ಣ ಪರ ಬ್ಯಾಟಿಂಗ್ ಆಡಿದ್ದಾರೆ. ನಿನ್ನೆ ಸಿದ್ಧಗಂಗಾ ಮಠಕ್ಕೆ ಸೋಮಣ್ಣ ಬಂದ ಸಂದರ್ಭದಲ್ಲಿಯೂ ಅವರ ಇದೇ ಮಾತುಗಳನ್ನು ಪುನರುಚ್ಛರಿಸಿದ್ದಾರೆ.

 ಮಾಜಿ ಸಿ.ಎಂ. ಬಿ.ಎಸ್.ಯಡಿಯೂರಪ್ಪ ವಿರುದ್ಧವೂ ತಮ್ಮ ಅಸಮಾಧಾನವನ್ನು ಸೋಮಣ್ಣ ಮುಂದುವರಿಸಿದ್ದಾರೆ. ಚುನಾವಣೆಯ ನಂತರ  ಅವರು ನನ್ನನ್ನು ಮಾತನಾಡಿಸಿಲ್ಲ ಎಂದು ಹೇಳುತ್ತಿದ್ದಾರೆ. ಚುನಾವಣೆಯ ಸಮಯದಲ್ಲಿ ಪ್ರತಿದಿನ ಕರೆ ಮಾಡಿ ಮಾತನಾಡಿಸುತ್ತಿದ್ದರು. ಚುನಾವಣೆ ಮುಗಿದ ನಂತರ ಮಾತನಾಡಿಸುತ್ತಿಲ್ಲ. ನನ್ನ ಚಿನ್ನದಂತಹ ಕ್ಷೇತ್ರಬಿಟ್ಟು ವರಿಷ್ಠರು ಹೇಳಿದರಲ್ಲ ಎಂದು ಎರಡು ಕಡೆಗೆ ಹೋದೆ. ಅವರ ಟಾಸ್ಕ್ ನಿರ್ವಹಿಸಿದ್ದೇನೆ. ಆದರೆ ನಾಯಕರುಗಳೇ ನನಗೆ ಕೈಕೊಟ್ಟರು ಎಂಬುದು ಅವರ ಆರೋಪ. ಸಿದ್ಧಗಂಗಾ ಕ್ಷೇತ್ರದಲ್ಲಿ ನಿನ್ನೆ ಅವರಾಡಿದ ಮಾತುಗಳು ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದ0ತೆಯೇ ಪ್ರತಿಕ್ರಿಯಿಸಿರುವ ಬಿ.ಎಸ್.ವೈ. ಸೋಮಣ್ಣ ನನ್ನ ಕರೆ ಸ್ವೀಕರಿಸುತ್ತಿಲ್ಲ, ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಅದೂ ಮೀರಿ ಹೋಗುವುದಾದರೆ ನಾನೇನು ಮಾಡಲಿಕ್ಕೆ ಸಾಧ್ಯ ಎಂದು ತನ್ನ ಅಸಹಾಯಕತೆ ಹೊರಹಾಕಿರುವಂತಿದೆ ಅವರ ಮಾತುಗಳು.

ಕಳೆದ ಜುಲೈ ತಿಂಗಳಿನಲ್ಲಿ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಬಿಜೆಪಿ ಆಪ್ತ ಕಾರ್ಯಕರ್ತರ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ಕ್ಷೇತ್ರವನ್ನು ಪ್ರಸ್ತುತ ತೇಜಸ್ವಿ ಸೂರ್ಯ ಪ್ರತಿನಿಧಿಸುತ್ತಿದ್ದಾರೆ. ನಾನೂ ಕೂಡ ಬೆಂಗಳೂರು ದಕ್ಷಿಣ ಕ್ಷೇತ್ರದ ಆಕಾಂಕ್ಷಿ ಎಂಬ ಸೋಮಣ್ಣ ಅವರ ಮಾತುಗಳು ಸಹಜವಾಗಿಯೇ ಅಲ್ಲಿ ಸಂಚಲನ ಉಂಟು ಮಾಡಿದೆ. 20 ವರ್ಷಗಳಿಂದ ಇಲ್ಲಿ ಒಂದೇ ಸಮುದಾಯಕ್ಕೆ ಟಿಕೆಟ್ ನೀಡಲಾಗುತ್ತಿದೆ. ಈ ಬಾರಿ ಬೇರೆ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂಬುದು ಅವರ ಆಗ್ರಹ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬ್ರಾಹ್ಮಣ ಸಮುದಾಯದ ದಿವಂಗತ ಅನಂತಕುಮಾರ್ 6 ಬಾರಿ ಗೆದ್ದಿದ್ದರು. ಅವರ ನಂತರ ಅದೇ ಸಮುದಾಯದ ತೇಜಸ್ವಿ ಸೂರ್ಯ ಅವರ ಪಾಲಾಗಿದೆ. ಇದೀಗ ಸೊಮಣ್ಣ ಅವರು ಆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು ಅಲ್ಲಿಯೂ ಕುತೂಹಲ ಮೂಡಿಸಿದ್ದರು. ಆದರೆ ಪಕ್ಷದೊಳಗೆ ಏನೆಲ್ಲಾ ಸಾಧ್ಯತೆಗಳು ಇವೆ ಎಂಬುದರ ಸೂಕ್ಷ್ಮವೂ  ಸೋಮಣ್ಣ ಅವರಲ್ಲಿದೆ. ಹೀಗಾಗಿ ಅಲ್ಲಿಗಿಂತ ಹೆಚ್ಚಾಗಿ ತುಮಕೂರಿನತ್ತ ಅವರ ಕಣ್ಣು ಹೊರಳಿದೆ.

ತುಮಕೂರು ಕ್ಷೇತ್ರದತ್ತ ಸೋಮಣ್ಣ ಕಣ್ಣು ನೆಟ್ಟಿರುವುದು ಇದು ಮೊದಲೇನಲ್ಲ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಗುಬ್ಬಿ ಕ್ಷೇತ್ರಕ್ಕೆ ಪುತ್ರನನ್ನು ತರುವ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಅದು ಸಾಧ್ಯವಾಗಲಿಲ್ಲ. ಸಿದ್ಧಗಂಗಾ ಮಠದೊಂದಿಗೆ ಹಿಂದಿನಿ0ದಲೂ ನಿಕಟ ಸಂಪರ್ಕ ಹೊಂದಿರುವ ಸೋಮಣ್ಣ ತುಮಕೂರು ಕ್ಷೇತ್ರದ ಮೇಲೆ ಒಲವು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಬಿಜೆಪಿಯೊಳಗೆ ಅವಕಾಶಗಳು ಇಲ್ಲವೆಂದರೆ ಕಾಂಗ್ರೆಸ್‌ನ0ದಲೇ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಅವರದ್ದು. ಇದಕ್ಕಾಗಿ ಈಗಾಗಲೇ ಎಲ್ಲ ಪ್ರಯತ್ನಗಳನ್ನೂ ನಡೆಸಿರುವಂತೆ ಕಾಣುತ್ತಿದೆ.

ಡಿಸೆಂಬರ್ 6 ರಂದು ಸಿದ್ಧಗಂಗಾ ಕ್ಷೇತ್ರದಲ್ಲಿ ಗುರು ಭವನ ಉದ್ಘಾಟನೆಯಾಗುತ್ತಿದೆ. ಸೋಮಣ್ಣ ಅವರ ಕುಟುಂಬ ನಿರ್ಮಿಸಿರುವ ಭವನವಿದು. ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಇಲ್ಲಿನ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಅವರುಗಳು ಮೇಲುಪಂಕ್ತಿ ಪಡೆದಿದ್ದಾರೆ. ಬಿಜೆಪಿ ವರಿಷ್ಠರಿಗಿಂತ ಕಾಂಗ್ರೆಸ್ ಮುಖಂಡರಿಗೆ ಪ್ರಾಧಾನ್ಯತೆ ನೀಡಿರುವುದರ ಹಿಂದೆ ಮುಂದಿನ ಲೆಕ್ಕಾಚಾರಗಳು ಇರುವಂತೆ ಕಾಣುತ್ತಿದೆ.

ತುಮಕೂರು ಜಿಲ್ಲೆಯ ಬೆಳವಣಿಗೆಗಳನ್ನು ಗಮನಿಸಿದರೆ ಈಗಾಗಲೇ ಬಹಳಷ್ಟು ಮಂದಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಹಳ ಹಿಂದಿನಿ0ದಲೂ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಸಿದ್ಧಾಂತವಾದಿಯಾಗಿದ್ದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್‌ನಲ್ಲಿದ್ದ ಹಲವರು ಪಕ್ಷ ತೊರೆದಿದ್ದಾರೆ. ಬಿಜೆಪಿಯೊಂದಿಗಿನ ಜೆಡಿಎಸ್ ಮೈತ್ರಿಯನ್ನು ಕೆಲವರು ಸಹಿಸುತ್ತಿಲ್ಲ. ಇಂತಹ ಹಲವು ಅನಿರೀಕ್ಷಿತ ಬೆಳವಣಿಗೆಗಳು ಆಯಾ ಪಕ್ಷಗಳ ಮೇಲೂ ಪ್ರಭಾವ ಬೀರುತ್ತಿವೆ. ತುಮಕೂರು ಜಿಲ್ಲೆಯ ಒಂದಷ್ಟು ನಂಟು ಹೊಂದಿರುವ ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದಾರೆ.

Leave a Reply

Your email address will not be published. Required fields are marked *