ವಿಜಯಪುರದಲ್ಲಿ ವಾಸವಿದ್ದ ತಮಿಳುನಾಡು ಉಗ್ರನ ಕುರಿತು ಸ್ಫೋಟಕ ಮಾಹಿತಿ ಬಯಲು!

ವಿಜಯಪುರದಲ್ಲಿ ವಾಸವಿದ್ದ ತಮಿಳುನಾಡು ಉಗ್ರನ ಕುರಿತು ಸ್ಫೋಟಕ ಮಾಹಿತಿ ಬಯಲು!

ವಿಜಯಪುರ: ಕೊಯಮತ್ತೂರಿನಲ್ಲಿ 27 ವರ್ಷ ಹಿಂದೆ ಸಂಭವಿಸಿದ್ದ ಸ್ಫೋಟ ಪ್ರಕರಣದ ಆರೋಪಿಯೂ ಆಗಿರುವ ಮಿಳುನಾಡು ಮೂಲದ‌ ಉಗ್ರ ಟೈಲರ್ ರಾಜಾ ಅಲಿಯಾಸ್ ರಾಜಾ ಸಿದ್ಧಿಕಿಯ ವಿಜಯಪುರ ಮನೆಯಲ್ಲಿ ತಮಿಳುನಾಡು ಭಯೋತ್ಪಾದನಾ ನಿಗ್ರಹ ದಳ ಸಿಬ್ಬಂದಿ ಶೋಧ ನಡೆಸಿದ್ದಾಗ ಮಹತ್ವದ ದಾಖಲೆಗಳು ಸಿಕ್ಕ ಬಗ್ಗೆ ಇದೀಗ ಮಾಹಿತಿ ಹೊರಬಿದ್ದಿದೆ. ಇದೇ 2025 ರ ಜುಲೈ 9 ರಂದು ವಿಜಯಪುರ ನಗರದಲ್ಲಿ ಟೈಲರ್ ರಾಜಾನನ್ನು ತಮಿಳುನಾಡಿನ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿತ್ತು. ವಿಜಯಪುರದ ಇಬ್ರಾಹಿಂ ರೋಜಾ ಏರಿಯಾದಲ್ಲಿ ಉಗ್ರ ವಾಸವಿದ್ದ ಮನೆಯನ್ನು ತಮಿಳುನಾಡಿನ ಉಗ್ರ ನಿಗ್ರಹ ಪಡೆ ಶೋಧ ನಡೆಸಿತ್ತು. ಆ ಸಂದರ್ಭದಲ್ಲಿ, ಉಗ್ರ ಬಳಸುತ್ತಿದ್ದ ನಕಲಿ ದಾಖಲೆಗಳನ್ನು ಪತ್ತೆ ಮಾಡಿರುವುದು ಇದೀಗ ಬಯಲಾಗಿದೆ.

ಉಗ್ರನ ಮನೆಯಲ್ಲಿ ಶೋಧ ನಡೆಸಿದ್ದ ತಮಿಳುನಾಡು ಭಯೋತ್ಪಾದನಾ ನಿಗ್ರಹ ದಳಕ್ಕೆ ನಕಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಗ್ಯಾಸ್ ಬುಕ್, ಡ್ರೈವಿಂಗ್ ಲೈಸೆನ್ಸ್ ಪತ್ತೆಯಾಗಿತ್ತು.

ಟೈಲರ್ ರಾಜಾ ಅಲಿಯಾಸ್ ರಾಜಾ ಸಿದ್ಧಿಕಿ ಯಾರು?

ಟೈಲರ್ ರಾಜಾ ಅಲಿಯಾಸ್ ರಾಜಾ ಸಿದ್ಧಿಕಿ 1998 ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟದ ಆರೋಪಿ. ಅಂದು ಸಂಭವಿಸಿದ್ದ ಬಾಂಬ್ ಸ್ಫೋಟಗಳಲ್ಲಿ 58 ಜನರು ಸಾವನ್ನಪ್ಪಿ, 250 ಜನ ಗಾಯಗೊಂಡಿದ್ದರು. ಆ ನಂತರ ತಲೆ ಮರೆಸಿಕೊಂಡು ಹಲವು ರಾಜ್ಯಗಳಲ್ಲಿ ರಾಜಾ ಸಿದ್ಧಿಕಿ ಓಡಾಡಿದ್ದ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಟೈಲರಿಂಗ್ ಕಲಿತು, ಅಲ್ಲಿ ಬೇರೆ ಹೆಸರಿನಲ್ಲಿ ಹಲವು ವರ್ಷ ಕೆಲಸ ಮಾಡಿದ್ದ.

2014ರಲ್ಲಿ ವಿಜಯಪುರಕ್ಕೆ ಬಂದಿದ್ದ ಉಗ್ರ ರಾಜಾ ಸಿದ್ಧಿಕಿ

2014ರಲ್ಲಿ ವಿಜಯಪುರಕ್ಕೆ ಬಂದಿದ್ದ ಟೈಲರ್ ರಾಜಾ ಅಲಿಯಾಸ್ ರಾಜಾ ಸಿದ್ಧಿಕಿ ಕರ್ನಾಟಕದ ಹುಬ್ಬಳ್ಳಿ, ಆಲಮೇಲ, ವಿಜಯಪುರ ನಗರದಲ್ಲಿ ಟೀಕಾಣಿ ಹೂಡಿದ್ದ. ವಿಜಯಪುರ ನಗರದ ಎಪಿಎಂಸಿಯಲ್ಲಿ ಹೋಲ್‌ಸೇಲ್ ತರಕಾರಿ ಮಾರಾಟ ಮಾಡುತ್ತಿದ್ದ. 2025ರ ಜುಲೈ 9 ರಂದು ವಿಜಯಪುರದಲ್ಲಿ‌ ತಮಿಳುನಾಡು ಭಯೋತ್ಪಾದನಾ ನಿಗ್ರಹ ದಳಕ್ಕೆ ಸಿಕ್ಕಿ ಬಿದ್ದಿದ್ದ. ಆತ ವಿಜಯಪುರದಲ್ಲಿ ಶಹಜಾನ್ ಶೇಖ್ ಎಂದು ಹೆಸರು ಬದಲಿಸಿಕೊಂಡಿದ್ದ. ಕರ್ನಾಟಕಕ್ಕೆ ಬಂದ ಬಳಿಕ ಶಹಜಾನ್ ಶೇಖ್ ಎಂದು ಹೆಸರು ಬದಲಿಸಿಕೊಂಡಿದ್ದ ಆತ ಮಹಾರಾಷ್ಟ್ರದಲ್ಲಿ ಟೈಲರ್ ರಾಜಾ ಎಂದು ಗುರುತಿಸಿಕೊಂಡಿದ್ದ. ಕೊಲ್ಲಾಪುರದಲ್ಲಿ ಟೈಲರಿಂಗ್ ಕಲಿತ ಬಳಿಕ ಟೈಲರ್ ರಾಜಾ ಎಂದು ಹೆಸರು ಬದಲಿಸಿದ್ದ. ಬಳಿಕ ಕರ್ನಾಟಕದ ಹುಬ್ಬಳ್ಳಿಯಲ್ಲಿ, ಆಲಮೇಲ, ವಿಜಯಪುರದಲ್ಲಿ ಜಹಜಾನ್ ಶೇಖ್ ಹೆಸರಲ್ಲಿ ಟೀಕಾಣಿ ಹೂಡಿದ್ದ.

ಉಗ್ರರ ಹಿಂದೆ ನಕಲಿ ಆಧಾರ್ ಮಾಫಿಯಾ?

ಉಗ್ರ ಸಿದ್ಧಿಕಿ ಮನೆಯಲ್ಲಿ ದೊರೆತಿರುವ ದಾಖಲೆಗಳು ಭಯೋತ್ಪಾದಕರ ಹಿಂದೆ ನಕಲಿ ಆಧಾರ್ ಮಾಫಿಯಾ ಕಾರ್ಯಾಚರಿಸುತ್ತಿದೆಯಾ ಎನ್ನುವ ಶಂಕೆಗೆ ಕಾರಣವಾಗಿದೆ. ಸದ್ಯ ಉಗ್ರ ಸಿದ್ಧಿಕಿ ಮನೆಯಲ್ಲಿ ದೊರೆತ ದಾಖಲೆಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *