“ಎಲ್ಲ ಮಾತಾಡದೆ ಸುಮ್ಮನೆ ವಾಪಸ್ ಹೋಗ್ತೀರಾ?” – ಡಿಕೆ ಶಿವಕುಮಾರ್
ನವದೆಹಲಿ: ‘ದೆಹಲಿಗೆ ಬಂದಿರುವುದೇ ರಾಜಕೀಯ ಮಾಡಲು, ಎಲ್ಲ ವಿಚಾರಗಳನ್ನು ಮಾತನಾಡದೆ ಸುಮ್ಮನೆ ವಾಪಸ್ ಹೋಗುತ್ತೇನಾ?’ ಇದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳ ಬಳಿ ಕೇಳಿದ ಪ್ರಶ್ನೆ. ಕರ್ನಾಟಕ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಗುದ್ದಾಟ ತೀವ್ರಗೊಂಡಿರುವ ಸಂದರ್ಭದಲ್ಲೇ ದೆಹಲಿಯ ಜನಪಥದಲ್ಲಿರುವ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನಿವಾಸದಲ್ಲಿ ಹೈಕಮಾಂಡ್ ನಾಯಕರ ಜತೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅವರು ಮಾತುಕತೆ ನಡೆಸಿದ್ದಾರೆ. ನಂತರ ಹೊರಬಂದು ಮಾತನಾಡಿದ ಅವರು, ಅಸ್ಸಾಂ ಚುನಾವಣೆ ವಿಚಾರವಾಗಿ ಹೈಕಮಾಂಡ್ ಜತೆ ಮಾತನಾಡಿರುವುದಾಗಿ ತಿಳಿಸಿದರು. ಅಸ್ಸಾಂನ ಕೆಲವು ನಾಯಕರೂ ಡಿಕೆಶಿ ಜತೆ ಇದ್ದರು.
ಕರ್ನಾಟಕ ರಾಜಕೀಯದ ಕುರಿತು ಏನು ಮಾತುಕತೆ ನಡೆಯಿತು ಎಂಬ ಪ್ರಶ್ನೆಗೆ, ಏನು ಮಾತನಾಡಬೇಕೋ ಅದೆಲ್ಲವನ್ನೂ ಮಾತನಾಡಿದ್ದೇನೆ. ಏನೇನು ಚರ್ಚೆ ನಡೆಯಿತು ಎಂಬುದನ್ನೆಲ್ಲ ಇಲ್ಲಿ ಹೇಳಲಾಗದು ಎಂದರು. ಇದು ಸಾಕಷ್ಟು ಕುತೂಹಲ ಮೂಡಿಸಿದೆ.
ಅಸ್ಸಾಂ ಚುನಾವಣಾ ಬಗ್ಗೆ ಚರ್ಚೆ ಮಾಡಲು ಸೋನಿಯಗಾಂಧಿ ನಿವಾಸಕ್ಕೆ ಆಗಮಿಸಿದ್ದೆವು. ಅಸ್ಸಾಂನಲ್ಲಿ ವಾಪಸ್ ಕಾಂಗ್ರೆಸ್ ಸರ್ಕಾರ ಬರಲಿದೆ. ಸೋನಿಯಗಾಂಧಿ ನಿವಾಸದ ಒಳಗೆ ಏನೇನು ಮಾತನಾಡಿದೆ, ಯಾರ ಜೊತೆಗೆಲ್ಲ ಮಾತನಾಡಿದೆ ಎಂದು ಇಲ್ಲಿ ಹೇಳುವುದಿಲ್ಲ. ಇಲ್ಲಿ ಬೀದಿಯಲ್ಲಿ ನಿಂತು ಎಲ್ಲ ಮಾತನಾಡುವ ಅಗತ್ಯ ಇಲ್ಲ. ಬಂದ ಮೇಲೆ ಏನೇನನು ಮಾತನಾಡಬೇಕೋ ಅದನ್ನೆಲ್ಲ ಮಾತನಾಡಿದ್ದೀನಿ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ: ಡಿಕೆಶಿ ಮಾರ್ಮಿಕ ಮಾತು
ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ಮಾರ್ಮಿಕವಾಗಿ ಮಾತನಾಡಿದ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಬಳಿ ಚರ್ಚೆ ಮಾಡಿದ್ದೆನೆ ಎಂಬುದನ್ನು ನಿಖರವಾಗಿ ಹೇಳಿಲ್ಲ. ಡಿಕೆ ಶಿವಕುಮಾರ್ ಮೊದಲು ಪ್ರಿಯಾಂಕಾ ಗಾಂಧಿ ಜೊತೆ ಅಸ್ಸಾಂ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದರು. ನಂತರ ರಾಹುಲ್ ಗಾಂಧಿ ಜೊತೆ ಚರ್ಚಿಸಿದ್ದರು.
For More Updates Join our WhatsApp Group :


