ಚೆನ್ನೈ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಚೆನ್ನೈನಲ್ಲಿರುವ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ. ಮನೆಯಲ್ಲಿ ಬಾಂಬ್ ಇಟ್ಟಿರೋದಾಗಿ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು, ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿ ಆಗಮಿಸಿ ಮನೆ ಬಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗದ ಕಾರಣ, ಇದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ನಟ, ಟಿವಿಕೆ ಅಧ್ಯಕ್ಷ ವಿಜಯ್ ಮನೆಯಲ್ಲಿಯೂ ಬಾಂಬ್ ಇಟ್ಟಿರೋದಾಗಿ ವ್ಯಕ್ತಿಯೋರ್ವ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ತಿಳಿಸಿದ್ದ. ಮಾಹಿತಿ ಆಧರಿಸಿ ವಿಜಯ್ ಮನೆಯಲ್ಲಿ ಪರಿಶೀಲಿಸಿದಾಗ ಇದು ಹುಸಿಬಾಂಬ್ ಕರೆ ಎಂಬುದು ಗೊತ್ತಾಗಿತ್ತು. ಘಟನೆ ಸಂಬಂಧ 38 ವರ್ಷದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದರು.
ವಾರದ ಹಿಂದೆಯೂ ಇಂತಹುದೆ ಪ್ರಕರಣ ತಮಿಳುನಾಡಿನ ಮದುರವೋಯಲ್ನಲ್ಲಿ ವರದಿಯಾಗಿತ್ತು. ಪೊಲೀಸ್ ಕಂಟ್ರೋಲ್ ರೂಂಗೆ ಕರೆಮಾಡಿದ್ದ ಅನಾಮಧೇಯ ವ್ಯಕ್ತಿ, ಪಲ್ಲವನ್ ನಗರ ಪಾರ್ಕ್ ಮತ್ತು ಹತ್ತಿರದ ದೇವಸ್ಥಾನದಲ್ಲಿ ಬಾಂಬ್ ಇಟ್ಟಿರೋದಾಗಿ ಹೇಳಿದ್ದ. ಮಾಹಿತಿ ಆಧರಿಸಿ ಬಾಂಬ್ ನಿಷ್ಕ್ರಿಯ ದಳ ಮತ್ತು ಒಶ್ವಾನ ದಳದ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಯಾವುದೇ ಬಾಂಬ್ ಅಥವಾ ಸ್ಫೋಟಕಗಳು ಪತ್ತೆಯಾಗಿರಲಿಲ್ಲ. ಹುಸಿ ಬಾಂಬ್ ಕರೆ ಮಾಡಿದ್ದ ವಿಲ್ಲುಪುರಮ್ ಜಿಲ್ಲೆಯ 43 ವರ್ಷದ ಭೂಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
For More Updates Join our WhatsApp Group :
