ನಕಲಿ ದಾಖಲೆ, ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಆಸ್ತಿ ಕಬಳಿಕೆ : ಕುಖ್ಯಾತ ಭೂಕಬಳಿಕೆದಾರ ಅರೆಸ್ಟ್

ನಕಲಿ ದಾಖಲೆ ಹಾಗೂ ನಕಲಿ ವ್ಯಕ್ತಿಗಳನ್ನ ಸೃಷ್ಟಿಸಿ ಆಸ್ತಿ ಕಬಳಿಕೆ ಹಿನ್ನೆಲೆ ಕೋಕಾ ಕಾಯ್ದೆಯಡಿ ಕುಖ್ಯಾತ ಭೂಕಬಳಿಕೆದಾರ ಜಾನ್ ಮೋಸನ್​ನನ್ನು ಬಂಧಿಸಲಾಗಿದೆ. ಸಿಐಡಿಅಧಿಕಾರಿಗಳು ಕೋಕಾ ಕಾಯ್ದೆಯಡಿ ಜಾನ್ ಮೋಸನ್ ಬಂಧಿಸಿದ್ದಾರೆ. ಬೆಂಗಳೂರಿನ ಕಲ್ಯಾಣ ನಗರ ನಿವಾಸಿಯಾಗಿರುವ ಜಾನ್ ಮೋಸನ್​ 16 ಜನರ ಗ್ಯಾಂಗ್ ಕಟ್ಟಿಕೊಂಡು ವಂಚನೆಕೆಲಸ ಮಾಡ್ತಿದ್ದ ಎಂದು ತಿಳಿದು ಬಂದಿದೆ.

2020ರಲ್ಲಿ ಜಾನ್ ಮೋಸನ್ ಆ್ಯಂಡ್​ ಗ್ಯಾಂಗ್‌ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಬಳಿಕ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನ ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ತನಿಖೆ ವೇಳೆ ಆರೋಪಿಗಳ ಅಕ್ರಮ ಚಟುವಟಿಕೆ ಮತ್ತಷ್ಟು ಬಯಲಾಗಿತ್ತು. ಹೀಗಾಗಿ ಆರೋಪಿಗಳ ವಿರುದ್ಧ 100ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದವು. ಸದ್ಯ 51 ಪ್ರಕರಣಗಳ ತನಿಖೆ ಮುಕ್ತಾಯಗೊಂಡು ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಜಾನ್ ಮೋಸನ್ ಆ್ಯಂಡ್ ಗ್ಯಾಂಗ್‌ ಸಂಘಟಿತ ಅಪರಾಧವೆಸಗುತ್ತಿದ್ದ ಹಿನ್ನೆಲೆ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಮೋಸನ್ ಬಂಧಿಸಲಾಗಿದೆ.

ಆರೋಪಿಗಳು, ವಿವಾದಿತ, ಖಾಲಿ ಜಮೀನು, ನಿವೇಶನಗಳನ್ನು ಗುರಿಯಾಗಿಸಿ ವಂಚನೆ ಮಾಡುತ್ತಿದ್ದರು. ಬಳಿಕ ಸಮಗ್ರ ಮಾಹಿತಿ ಸಂಗ್ರಹಿಸಿ ನಕಲಿ ದಾಖಲಾತಿ ಸೃಷ್ಟಿಸುತ್ತಿದ್ದರು. ಆರೋಪಿಗಳೇ ಮಾಲೀಕ ಹಾಗೂ ಬಾಡಿಗೆದಾರರನ್ನು ಸೃಷ್ಟಿಸುತ್ತಿದ್ದರು. ಇಬ್ಬರ ನಡುವೆ ವಿವಾದವಿದೆ ಎಂದು ಕೋರ್ಟ್‌ ಮೊರೆ ಹೋಗುತ್ತಿದ್ದರು. ಕೋರ್ಟ್‌ನಲ್ಲಿ ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸುವ ರೀತಿ ಆದೇಶ ತರುತ್ತಿದ್ದರು. ಅಸಲಿ ಮಾಲೀಕರಿಗೆ ಆದೇಶ ಪತ್ರ ತೋರಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಕೋರ್ಟ್‌ ಆದೇಶದ ಮೇರೆಗೆ ಸ್ವತ್ತಿನಲ್ಲಿದ್ದವರನ್ನು ಎಬ್ಬಿಸಿ ಜಾಗ ವಶಕ್ಕೆ ಪಡೆಯುತ್ತಿದ್ದರು. ಈ ರೀತಿ ಸ್ವತ್ತು ವಶಕ್ಕೆ ಪಡೆದು ಕುಖ್ಯಾತ ಭೂಕಬಳಿಕೆದಾರ ಮೋಸನ್ ವಂಚಿಸುತ್ತಿದ್ದ.

ಈ ಬಗ್ಗೆ ಮೋಸ ಹೋದ ಆಸ್ತಿ ಮಾಲೀಕರು ಕೋರ್ಟ್ ಮೊರೆ ಹೋಗಿದ್ದು ಬಳಿಕ ಹಲಸೂರು ಗೇಟ್ ಪೊಲೀಸ್‌ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಬೆಂಗಳೂರು ನಗರ, ಸುತ್ತಮುತ್ತ ಅಮಾಯಕರ ಜಮೀನು, ನಿವೇಶನ, ಮನೆಗಳನ್ನ ಕಬಳಿಸಿದ್ದ ವಂಚಕ ಜಾನ್ ಮೋಸನ್ ಆ್ಯಂಡ್ ಗ್ಯಾಂಗ್‌ ಸದ್ಯ ಅರೆಸ್ಟ್ ಆಗಿದೆ.

Leave a Reply

Your email address will not be published. Required fields are marked *