ಗುತ್ತಿಗೆ ಆಧಾರದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳ ಭರ್ತಿ : ದಿನೇಶ್ ಗುಂಡೂರಾವ್

ಬೆಂಗಳೂರು: ಖಾಲಿ ಇರುವ ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ. ಮೊದಲು ಗುತ್ತಿಗೆ ಆಧಾರದಲ್ಲಿ ತಕ್ಷಣವೇ ನೇಮಿಸಿಕೊಂಡು ನಂತರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಕೆ ಮಾಡುತ್ತೇವೆ. ಈ ವರ್ಷ ನೇಮಕಾತಿಗೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿಂದು ಬಿಜೆಪಿ ಸದಸ್ಯ ಕೇಶವಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರೋಗ್ಯ ನಿರೀಕ್ಷಣಾಧಿಕಾರಿ ಕೊರತೆ ಇದೆ, 5,944 ಆರೋಗ್ಯ ನಿರೀಕ್ಷಕರ ಹುದ್ದೆ ಇದೆ. ಆದರೆ 3950 ಆರೋಗ್ಯ ನಿರೀಕ್ಷಕರು ಮಾತ್ರ ಇದ್ದಾರೆ, 8 ವರ್ಷಗಳಿಂದ ಈ ಹುದ್ದೆಗಳ ಭರ್ತಿ ಆಗಿಲ್ಲ ಎನ್ನುವ ಆರೋಪ ಸರಿಯಿದೆ. ಆರೋಗ್ಯ ನಿರೀಕ್ಷಣೆಯ ಶೇ.40 ರಷ್ಟು ಹುದ್ದೆ ಖಾಲಿ ಇವೆ, ನೇಮಕಾತಿಗೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದೇವೆ, ಇದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಬೇಕು. ಹಾಗಾಗಿ ಮೊದಲು ಗುತ್ತಿಗೆ ಆಧಾರದಲ್ಲಿ ಹುದ್ದೆಗಳ ಭರ್ತಿ ಮಾಡಿ ನಂತರ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಿದ್ದೇನೆ. ನಮ್ಮದು ಸೇವಾ ಕ್ಷೇತ್ರ, ಹೆಚ್ಚಿನ‌ ಸಿಬ್ಬಂದಿ ಅಗತ್ಯ ನೇಮಕಾತಿ ವಿಚಾರದಲ್ಲಿ ಈ ವರ್ಷ ಒಳ್ಳೆಯ ನಿರ್ಧಾರ ಆಗಲಿದೆ. ಇನ್ನು ಡೆಂಗ್ಯೂ ನಿಯಂತ್ರಣದಲ್ಲಿ ಯಾವುದೇ ನಿರ್ಲಕ್ಷ್ಯ ಇಲ್ಲ, ಇರುವ ಸಿಬ್ಬಂದಿಯಲ್ಲಿ ವ್ಯವಸ್ಥಿತಿ ರೀತಿ ಕ್ರಮ ವಹಿಸಲಾಗಿದೆ, ಸದ್ಯ ಬೇರೆ ಬೇರೆ ಇಲಾಖೆಯ ಸಿಬ್ಬಂದಿಯ ನೆರವು ಪಡೆದು ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಸೆಪ್ಟೆಂಬರ್‌ ಒಳಗೆ ಶುಚಿ ಯೋಜನೆ ಜಾರಿ: ಶುಚಿ ಯೋಜನೆಯಡಿ ಶಾಲಾ ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಕೊಡಲಾಗುತ್ತಿದೆ. ಮೆನ್ಯುಸ್ಟ್ರಿಯಲ್ ಕಪ್ ಅನ್ನು ಎರಡು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನೀಡಲಾಗುತ್ತಿದೆ, ಇದು ದೀರ್ಘಾವಧಿಗೆ ಬಳಸಿಕೊಳ್ಳಬಹುದು ಮತ್ತು ಹೈಜಿನ್ ಕೂಡ ಇರಲಿದೆ. ಹಾಗಾಗಿ ಮೆನುಸ್ಟ್ರಿಯಲ್ ಕಪ್ ನೀಡುವ ಚಿಂತನೆ ಇದೆ. ಸದ್ಯ ಸೆಪ್ಟಂಬರ್ ವೇಳೆಗೆ ಎಲ್ಲ ಮಕ್ಕಳಿಗೂ ಸ್ಯಾನಿಟರಿ ಪ್ಯಾಡ್ ನೀಡಲಾಗುತ್ತದೆ. ಈ ಯೋಜನೆಯನ್ನು ಹಿಂದೆ ನಿಲ್ಲಿಸಿದ್ದರು. ನಾವು ಈಗ ಮತ್ತೆ ಪ್ರಾರಂಭ ಮಾಡಿದ್ದೇವೆ, ಸೆಪ್ಟೆಂಬರ್ ವೇಳೆಗೆ ಸ್ಟ್ರೀಮ್ ಲೈನ್​ಗೆ ಬರಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *