ಕಾರ್ಮಿಕರೊಟ್ಟಿಗೆ ಮಾತುಕತೆಗೆ ಮುಂದಾದ ಫಿಲಂ ಚೇಂಬರ್, ಅಂತ್ಯವಾಗುವುದೇ ಪ್ರತಿಭಟನೆ.

ಕಾರ್ಮಿಕರೊಟ್ಟಿಗೆ ಮಾತುಕತೆಗೆ ಮುಂದಾದ ಫಿಲಂ ಚೇಂಬರ್, ಅಂತ್ಯವಾಗುವುದೇ ಪ್ರತಿಭಟನೆ.

ಕಳೆದ ಒಂದು ವಾರದಿಂದ ತೆಲುಗು ಸಿನಿಮಾಗಳ ಚಿತ್ರೀಕರಣಗಳು ಬಂದ್ ಆಗಿವೆ. ತೆಲುಗು ಸಿನಿಮಾ ಕಾರ್ಮಿಕರುಗಳು ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ತೆಲುಗು ಫಿಲಂ ಚೇಂಬರ್ ಮುಖ್ಯಸ್ಥರು ಪ್ರತಿಭಟನಾ ನಿರತರೊಟ್ಟಿಗೆ ಮಾತುಕತೆಗೆ ಮುಂದಾಗಿದ್ದಾರೆ. ತೆಲುಗು ಸಿನಿಮಾ ಕಾರ್ಮಿಕರಿಗೆ ಈಗ ದೊರಕುತ್ತಿರುವುದೆಷ್ಟು? ಹೆಚ್ಚಳವಾಗುತ್ತಿರುವ ವೇತನ ಎಷ್ಟು?

ತೆಲುಗು ಚಿತ್ರರಂಗದಲ್ಲಿ (Tollywood) ಕಾರ್ಮಿಕರ ಪ್ರತಿಭಟನೆ ನಡೆಯುತ್ತಿದೆ. ಸುಮಾರು 24 ವಿಭಾಗಗಳ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದು ಇದರಿಂದಾಗಿ ಹಲವಾರು ತೆಲುಗು ಸಿನಿಂಆಗಳು ಸಮಸ್ಯೆಗೆ ಸಿಲುಕಿವೆ. ಹಲವು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ಕಾರ್ಮಿಕರ ಹಾಗೂ ಇತರೆ ಕಾರ್ಮಿಕರ ಸಂಭಾವನೆಗಳನ್ನು ಹೆಚ್ಚು ಮಾಡುವಂತೆ ಒತ್ತಾಯಿಸಿ ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್ (ತೆಲುಗು ಸಿನಿಮಾ ಕಾರ್ಮಿಕರ ಒಕ್ಕೂಟ) ಪ್ರತಿಭಟನೆ ನಡೆಸುತ್ತಿದೆ.

ಕಳೆದ ಮೂರು ವರ್ಷಗಳಿಂದಲೂ ದಿನಗೂಲಿ ಹಾಗೂ ವೇತನ ಹೆಚ್ಚಳ ಆಗಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದು, ಕೂಡಲೇ 30% ದಿನಗೂಲಿ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಕೆಲವು ನಿರ್ಮಾಪಕರು ಆಕ್ಷೇಪ ವ್ಯಕ್ತಪಡಿಸಿದ್ದು, ಇತರೆ ಸಿನಿಮಾ ರಂಗಗಳಿಗೆ ಹೋಲಿಸಿದರೆ ತೆಲುಗು ಸಿನಿಮಾ ರಂಗದ ಕಾರ್ಮಿಕರ ದಿನಗೂಲಿ ಹೆಚ್ಚಿದೆ, ಈಗಾಗಲೇ ಅವರಿಗೆ ಹೆಚ್ಚಿನ ವೇತನ ನೀಡಲಾಗುತ್ತಿದೆ ಎಂದಿದ್ದಾರೆ. ಆದರೆ ಇನ್ನು ಕೆಲವರು ಕಾರ್ಮಿಕರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ. ಇದೀಗ ತೆಲುಗು ಫಿಲಂ ಚೇಂಬರ್, ಕಾರ್ಮಿಕರ ಪ್ರತಿಭಟನೆ ಅಂತ್ಯಗೊಳಿಸಲು ಮುಂದಾಗಿದೆ.

ಫಿಲಂ ಚೇಂಬರ್​ನ ಪ್ರಮುಖರು ಈಗಾಗಲೇ ಪ್ರತಿಭಟನಾ ನಿರತ ಕಾರ್ಮಿಕರ ಮುಖಂಡರುಗಳೊಟ್ಟಿಗೆ ಸಭೆ ನಡೆಸಿದ್ದು ಕಾರ್ಮಿಕರು ಒತ್ತಾಯಿಸುತ್ತಿರುವಷ್ಟು ನೀಡಲಾಗದು ಆದರೆ ಹಂತ ಹಂತವಾಗಿ ಅವರ ವೇತನವನ್ನು ಏರಿಸಲಾಗುವುದು ಎಂದಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಫಿಲಂ ಚೇಂಬರ್ ಮುಖಂಡ ದಾಮೋದರ್ ಪ್ರಸಾದ್, ‘ದಿನಕ್ಕೆ 2000 ಪಡೆಯುತ್ತಿರುವ ಕಾರ್ಮಿಕನಿಗೆ ಈ ವರ್ಷ 15% ವೇತನ ಹೆಚ್ಚಳ ದೊರಕಲಿದೆ. ಅದರ ಮುಂದಿನ ವರ್ಷ 5% ಅದರ ಮುಂದಿನ 5% ಹೀಗೆ ಪ್ರತಿ ವರ್ಷವೂ 5% ವೇತನ ಹೆಚ್ಚಳ ಮಾಡಲಾಗುವುದು ಎಂದಿದ್ದಾರೆ. ಅದೇ ಈಗ 1000 ರೂಪಾಯಿ ದಿನಗೂಲಿ ಪಡೆಯುತ್ತಿರುವ ಕಾರ್ಮಿಕನಿಗೆ 20% ಹೆಚ್ಚಳ ಮಾಡಲಾಗುತ್ತದೆ ಎಂದಿದ್ದಾರೆ. ಕಾರ್ಮಿಕನ ಪ್ರಸ್ತುತ ದಿನಗೂಲಿ ಆಧರಿಸಿ ಹೆಚ್ಚಳ ಮಾಡಲಾಗುತ್ತದೆ ಎಂದಿದ್ದಾರೆ.

ಆದರೆ ಕಡಿಮೆ ಬಜೆಟ್​ನ ಸಿನಿಮಾಗಳಿಗೆ ಕೆಲಸ ಮಾಡುವ ಕಾರ್ಮಿಕರ ವೇತನದಲ್ಲಿ ಯಾವುದೇ ಹೆಚ್ಚಳ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಡಿಮೆ ಬಜೆಟ್​ ಸಿನಿಮಾಗಳಿಗೆ ಹೊರೆ ಆಗಬಾರದೆಂಬ ಕಾರಣಕ್ಕೆ ಕಡಿಮೆ ಬಜೆಟ್ ಸಿನಿಮಾಗಳ ಕಾರ್ಮಿಕರ ವೇತನವನ್ನು ಹೆಚ್ಚಳ ಮಾಡುತ್ತಿಲ್ಲ ಎಂದಿದ್ದಾರೆ.

ಆಗಸ್ಟ್ 4 ರಿಂದಲೂ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ತೆಲುಗಿನ ಹಲವಾರು ಸಿನಿಮಾಗಳ ಚಿತ್ರೀಕರಣ ನಿಂತು ಹೋಗಿದೆ. ಕೆಲ ದೊಡ್ಡ ಬಜೆಟ್ ಸಿನಿಮಾಗಳ ಕೆಲಸಗಳು ಮಾತ್ರ ಚಾಲ್ತಿಯಲ್ಲಿದೆ. ಕೆಲವು ನಿರ್ಮಾಣ ಸಂಸ್ಥೆಗಳು ಹೆಚ್ಚಿನ ಮೊತ್ತದ ವೇತನ ನೀಡುತ್ತಿರುವ ಕಾರಣ ಕೆಲವು ಸಿನಿಮಾಗಳ ಚಿತ್ರೀಕರಣ ಮಾತ್ರವೇ ನಡೆಯುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *