ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ನಲ್ಲಿ ಭಾರತ ಮತ್ತೊಂದು ಪದಕವನ್ನು ತನ್ನದಾಗಿಸಿಕೊಂಡಿದೆ. 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಮತ್ತು ಮನು ಭಾಕರ್ ಜೋಡಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.
2 ದಿನಗಳ ಹಿಂದಷ್ಟೇ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದ ಮನು, ಇದೀಗ 2ನೇ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮುನ್ನ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಅವರು ಮೂರನೇ ಸ್ಥಾನ ಅಲಂಕರಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಭಾರತದ ಪದಕದ ಖಾತೆ ತೆರೆದಿದ್ದರು.ಇದೀಗ ಸರಬ್ಜೋತ್ ಸಿಂಗ್ ಜೊತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಮನು ಭಾಕರ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತಕ್ಕೆ 2ನೇ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಇನ್ನು ಮನು ಭಾಕರ್ 25 ಮೀಟರ್ ಏರ್ ಪಿಸ್ತೂಲ್ ಮಹಿಳಾ ಸ್ಫರ್ಧೆಯಲ್ಲೂ ಭಾಗವಹಿಸುತ್ತಿದ್ದು, ಹೀಗಾಗಿ ಭಾರತೀಯ ನಾರಿಯಿಂದ ಮೂರನೇ ಪದಕ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ.
ಮಂಗಳವಾರ ನಡೆದ ಕಂಚಿನ ಪದಕ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ದಕ್ಷಿಣ ಕೊರಿಯಾದ ಯೆ ಜಿನ್ ಒಹ್ ಮತ್ತು ವೊನೊಹೊ ಲೀ ವಿರುದ್ಧ 16-10 ಅಂಕಗಳಿಂದ ಗೆದ್ದು ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಸೋಮವಾರ ನಡೆದಿದ್ದ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್-ಸರಬ್ಜೋತ್ ಸಿಂಗ್ ಒಟ್ಟು 580 ಅಂಕ ಗಳಿಸಿದ್ದರು. ಕೊರಿಯಾದ ಜೋಡಿ 579 ಅಂಕ ಗಳಿಸಿತ್ತು.