ನವದೆಹಲಿ: ಇಂದಿನಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೊಸದಾಗಿ ಚುನಾಯಿತರಾದ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 26 ರಂದು ಸ್ಪೀಕರ್ ಆಯ್ಕೆ ನಡೆಯುವ ಸಾಧ್ಯತೆ ಇದೆ. NEET-UG ಮತ್ತು UGC-NET ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ, ಹಾಗೂ ಹಂಗಾಮಿ ಸ್ವೀಕರ್ ನೇಮಕ ವಿಚಾರದ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಇದೇ ವಿಚಾರ ಸದನದಲ್ಲಿ ಗದ್ದಲವನ್ನು ಸೃಷ್ಟಿ ಮಾಡುವ ಸಾಧ್ಯತೆಗಳಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಭಾರತೀಯ ಜನತಾ ಪಕ್ಷದ ಸಂಸದ ಭರ್ತೃಹರಿ ಮಹತಾಬ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಮಹತಾಬ್ ಅವರು ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಲೋಕಸಭೆಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸದನದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ಕರೆಯಲಿದ್ದಾರೆ.
ಜೂನ್ 26 ರಂದು ಲೋಕಸಭೆ ಸ್ಪೀಕರ್ ಆಯ್ಕೆ ನಡೆಯಲಿದೆ. ಜೂನ್ 27 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾರ್ವತ್ರಿಕ ಚುನಾವಣೆ ನಂತರ ನಡೆಯುವ 18 ನೇ ಲೋಕಸಭೆಯ ಮೊದಲ ಅಧಿವೇಶನ ಇದಾಗಿದೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎನ್‌ಡಿಎ ಈ ಬಾರಿಯ ಲೋಕಸಭೆಯಲ್ಲಿ 293 ಸ್ಥಾನಗಳನ್ನು ಪಡೆದುಕೊಂಡಿದೆ. ಇನ್ನು ಇಂಡಿಯಾ ಒಕ್ಕೂಟ 234 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಬಾರಿ ಕಾಂಗ್ರೆಸ್ ಏಕಾಂಗಿಯಾಗಿ 99 ಸ್ಥಾನಗಳನ್ನು ಪಡೆದುಕೊಂಡಿದೆ.