Uttar Pradesh || 17 ಜಿಲ್ಲೆಗಳಲ್ಲಿ ಪ್ರವಾಹ : ಪ್ರಯಾಗ್‌ರಾಜ್‌ ಬಹುತೇಕ ಮುಳುಗಡೆ || Floods in 17 districts

Floods in 17 districts: Prayagraj almost submerged

ಲಕ್ನೋ: ಮುಂಗಾರು ಚುರುಕುಗೊಂಡಿದ್ದು, ಹವಾಮಾನ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಯುಪಿಯ 17 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಈವರೆಗೆ 12 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಮುಖ್ಯವಾಗಿ ಸಂಗಮ್‌ನಗರ ಎಂದೇ ಕರೆಯಲ್ಪಡುವ ಹಾಗೂ ಮಹಾ ಕುಂಭಮೇಳ ನಡೆದ ಪ್ರಯಾಗ್‌ರಾಜ್‌ನ ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅಲ್ಲದೇ ವಾರಣಾಸಿ ಸೇರಿದಂತೆ ಅನೇಕ ನಗರಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ

ಭಾರೀ ಮಳೆಯಿಂದಾಗಿ ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಗಂಗಾ ನದಿ ತಟದಲ್ಲಿರುವ ಪ್ರದೇಶಗಳು ಮುಳುಗಡೆಯಾಗುತ್ತಿವೆ. ಪ್ರಯಾಗ್‌ರಾಜ್ ನಗರದ ಸಲೋರಿ, ರಾಜಪುರ, ದಾರಗಂಜ್, ಬಘಾಡಾ ಮುಂತಾದ ಪ್ರದೇಶಗಳು ಮುಳುಗಿಹೋಗಿವೆ. ಅದೇ ಸಮಯದಲ್ಲಿ, ಮಿರ್ಜಾಪುರ, ವಾರಣಾಸಿ, ಅಯೋಧ್ಯೆ, ಚಂದೌಲಿ, ಬಲ್ಲಿಯಾದ ಪರಿಸ್ಥಿತಿಯೂ ತೀರಾ ಹದಗೆಟ್ಟಿದೆ. ಅಲ್ಲದೇ ಲಕ್ನೋ, ರಾಯ್ ಬರೇಲಿ, ಅಮೇಥಿ, ಸುಲ್ತಾನ್ಪುರ್, ಬಹ್ರೈಚ್ ಮತ್ತು ಅಂಬೇಡ್ಕರ್ ನಗರದಲ್ಲೂ ಭಾರೀ ಮಳೆ ಮುಂದುವರಿದಿದ್ದು, ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಪ್ರಯಾಗ್‌ರಾಜ್‌ನಲ್ಲಿ ಗಂಗಾ-ಯಮುನಾ ಸಂಗಮದ ನಂತರ ಬರುವ ಪ್ರದೇಶಗಳು ಕೆಟ್ಟ ಸ್ಥಿತಿಯಲ್ಲಿವೆ. ಉಕ್ಕಿದ ಗಂಗೆ, ಯಮುನೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ NDRF, SDRF ತಂಡಗಳು ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಉಳಿದಂತೆ ಜನರು ಸುರಕ್ಷಿತ ಸ್ಥಳಗಳಲ್ಲಿರುವಂತೆ ಸರ್ಕಾರ ಎಚ್ಚರಿಕೆ ನೀಡಿದೆ

Leave a Reply

Your email address will not be published. Required fields are marked *