ನವದೆಹಲಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಯೂಟ್ಯೂಬರ್ಗಳಿಗೆ ವಿದೇಶಗಳಿಂದ ಹಣ ಸಂದಾಯವಾಗುತ್ತಿದೆ ಎಂಬ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಬೇಕು ಎಂದು ಕೋರಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ಧರ್ಮಸ್ಥಳ ದೇವಸ್ಥಾನಕ್ಕೆ ದೇಶ ವಿದೇಶಗಳಿಂದದ ಭಕ್ತರು ಬರುತ್ತಾರೆ. ಹೀಗಾಗಿ ದೇಗುಲದ ಪಾವಿತ್ರ್ಯತೆ ಉಳಿಸಬೇಕಿದೆ. ದೇವಾಲಯದ ಗೌರವಕ್ಕೆ ಧಕ್ಕೆ ಆಗಬಾರದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಗೃಹ ಸಚಿವರಿಗೆ ಪತ್ರ ಬರೆದ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ಕೆಲ ಯೂಟ್ಯೂಬರ್ಗಳು ದೇಗುಲದ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ವಿದೇಶದಿಂದ ಹಣ ಬಂದ ಬಗ್ಗೆ ದೂರುಗಳು ಕೇಳಿಬಂದಿವೆ. ಹೀಗಾಗಿ ಇ.ಡಿ ಮೂಲಕ ತನಿಖೆ ನಡೆಸಲು ನಾನು ಒತ್ತಾಯ ಮಾಡಿದ್ದೇನೆ. ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ನಾನು ವ್ಯಕ್ತಿಗತವಾಗಿ ಪತ್ರ ಬರೆದಿಲ್ಲ. ಕರ್ನಾಟಕ ಸರ್ಕಾರ ಎಸ್ಐಟಿ ಮೂಲಕ ತನಿಖೆಗೆ ಸೂಚಿಸಿದ್ದಕ್ಕೆ ಸ್ವಾಗತವಿದೆ. ಆದರೆ, ಅನಾಮಧೇಯ ಭೀಮನಿಂದ ದಾರಿ ತಪ್ಪಿಸುವ ಕೆಲಸ ಆಗಿದೆ ಎಂದು ಹೇಳಿದರು.
ಆಧಾರದ ಇಲ್ಲದೆ ಸೆಂಥಿಲ್ ವಿರುದ್ಧ ಹೇಳಿಕೆ ನೀಡಿಲ್ಲ: ಜನಾರ್ದನ ರೆಡ್ಡಿ
ಧರ್ಮಸ್ಥಳ ಪ್ರಕರಣದ ಷಡ್ಯಂತ್ರದ ಹಿಂದೆ ತಿರುವಳ್ಳೂರ್ ಕಾಂಗ್ರೆಸ್ ಸಂಸದ, ದಕ್ಷಿಣ ಕನ್ನಡ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎಂದು ಸುಮ್ಮನೆ ಆರೋಪ ಮಾಡಿಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ಆರೋಪಕ್ಕೆ ಸಂಬಂಧಿಸಿ ನಮ್ಮ ಬಳಿ ಸೂಕ್ತ ಮಾಹಿತಿ ಇದೆ. ಧರ್ಮಸ್ಥಳ ಕೇಸ್ನಲ್ಲಿ ಸೆಂಥಿಲ್ ಕೈವಾಡ ಖಂಡಿತಾ ಇದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಸಿಕಾಂತ್ ಸೆಂಥಿಲ್ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಾಗಲಿ, ಸಂಬಂಧವಾಗಲಿ ಇಲ್ಲ. ನಾನು ಸಚಿವನಾಗಿದ್ದಾಗ ಸೆಂಥಿಲ್ ಬಳ್ಳಾರಿಯಲ್ಲಿ ಇರಲೇ ಇಲ್ಲ. ಷಡ್ಯಂತ್ರದ ವಿರುದ್ಧ ತನಿಖೆ ಮಾಡಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡುತ್ತೇನೆ. ಹೈಕೋರ್ಟ್ ಅಥವಾ ಸುಪ್ರಿಂಕೋರ್ಟ್ಗೆ ಹೋಗಲೂ ಸಿದ್ಧ ಎಂದು ರೆಡ್ಡಿ ಹೇಳಿದ್ದಾರೆ.
ರೆಡ್ಡಿ ಮಾಡಿದ್ದ ಆರೋಪದ ಕುರಿತು ಪ್ರತಿಕ್ರಿಯಿಸಿದ್ದ ಸಸಿಕಾಂತ್ ಸೆಂಥಿಲ್, ಆ ಹೇಳಿಕೆ ಕೇಳಿ ನಗು ಬರುತ್ತಿದೆ. ನನಗೆ ಇದರ ಹಿಂದೆ ಏನಿದೆ ಎಂಬುದು ಗೊತ್ತಿಲ್ಲ. ನಾನು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ 6 ವರ್ಷ ಆಗಿದೆ. ಈಗ ನಾನು ಬೇರೆ ಪಕ್ಷದಲ್ಲಿ ಇದ್ದೇನೆ. ನಾನು ಬಳ್ಳಾರಿಯಲ್ಲಿ ಕರ್ತವ್ಯದಲ್ಲಿ ಇದ್ದಾಗ ಅವರ (ರೆಡ್ಡಿ) ಬಂಧನ ಆಗಿತ್ತು. ಆಗ ಮಾತ್ರ ರೆಡ್ಡಿಯನ್ನು ನೋಡಿದ್ದೆ ಎಂದಿದ್ದರು. ಅದಕ್ಕೀಗ ರೆಡ್ಡಿ ಪ್ರತಿಕ್ರಿಯಿಸಿ, ಮಾಹಿತಿ ಇದ್ದೇ ಆರೋಪ ಮಾಡಿದ್ದೇನೆ ಎಂದಿದ್ದಾರೆ.
For More Updates Join our WhatsApp Group :