ಮೇ ತಿಂಗಳಲ್ಲಿ ಸಂಚಾರ ಆರಂಭಕ್ಕೆ ಬಿಎಂಆರ್ಸಿಎಲ್ ಸಿದ್ಧತೆ.
ಬೆಂಗಳೂರು: ನಮ್ಮ ಮೆಟ್ರೋ ವಿಸ್ತರಣೆಗೆ ಮತ್ತೊಂದು ಹೆಜ್ಜೆ ಇಟ್ಟಿರುವ ಬಿಎಂಆರ್ಸಿಎಲ್ ಮೇ ತಿಂಗಳಲ್ಲಿ ಪಿಂಕ್ ಲೈನ್ನಲ್ಲಿ ಕಾರ್ಯಾಚರಣೆ ಶುರು ಮಾಡಲು ಸಿದ್ಧತೆ ಶುರುಮಾಡಿದೆ. ಪಿಂಕ್ ಲೈನ್ ಮೆಟ್ರೋಗಾಗಿ ನಾಲ್ಕನೇ ರೈಲು ಭಾನುವಾರ ಬಂದಿಳಿದಿದೆ. ಆರು ಕೋಚ್ಗಳಿರುವ ಈ ಹೊಸ ರೈಲು ಸೆಟ್ ಅನ್ನು ಮಾರ್ಚ್ 13ರಂದು ಬಿಇಎಂಎಲ್ ಸಂಸ್ಥೆಯ ನ್ಯೂ ತಿಪ್ಪಸಂದ್ರ ಘಟಕದಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕೊತ್ತನೂರು ಡಿಪೋಗೆ ತರಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಈ ರೈಲನ್ನು ಪ್ರಸ್ತುತ ಕೊತ್ತನೂರು ಡಿಪೋದಲ್ಲಿನ ಇನ್ಸ್ಪೆಕ್ಷನ್ ಬೇ ಲೈನ್ ಗೆ ಸ್ಥಳಾಂತರಿಸಿ ಅಗತ್ಯ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಪರೀಕ್ಷೆಗಳು ಮತ್ತು ನಿಯಮಾನುಸಾರ ಅನುಮತಿ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ರೈಲು ಸೇವೆಗೆ ಸಿದ್ಧವಾಗಲಿದೆ.
ಸುಮಾರು 7.5 ಕಿಲೋಮೀಟರ್ ಉದ್ದದ ಕಾಳೇನ ಅಗ್ರಹಾರ – ತಾವರೆಕೆರೆಯ ಪಿಂಕ್ ಲೈನ್ ಮಾರ್ಗದಲ್ಲಿ ಮೇ ತಿಂಗಳಲ್ಲಿ ರೈಲು ಸಂಚಾರ ಆರಂಭಿಸಲು ಬಿಎಂಆರ್ಸಿಎಲ್ ಉದ್ದೇಶಿಸಿದೆ.
ನೇರಳೆ ಮತ್ತು ಹಸಿರು ಮಾರ್ಗಗಳ ಪ್ರಯಾಣಿಕರಿಗೂ ಗುಡ್ ನ್ಯೂಸ್
ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿನ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಕೂಡ ಕ್ರಮ ಕೈಗೊಳ್ಳಲಾಗಿದೆ. ಕೋಲ್ಕತ್ತಾ ಮೂಲದ ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆ ಪರ್ಪಲ್ ಹಾಗೂ ಗ್ರೀನ್ ಲೈನ್ಗಳಿಗಾಗಿ ಎರಡನೇ ಡಿಟಿಜಿ ರೈಲು ಸೆಟ್ ಅನ್ನು ಕಳುಹಿಸಿದೆ. ಈ ರೈಲಿನ ಮೂರು ಕೋಚ್ಗಳನ್ನು ಮಾರ್ಚ್ 13ರಂದು ಕಳುಹಿಸಲಾಗಿದ್ದು, ಉಳಿದ ಮೂರು ಕೋಚ್ಗಳು ಮರುದಿನ ರಾತ್ರಿ ರವಾನೆಯಾಗಿವೆ. ಈ ರೈಲು ಈ ತಿಂಗಳ ಅಂತ್ಯದೊಳಗೆ ಪೀಣ್ಯಾ ಡಿಪೋ ತಲುಪುವ ಸಾಧ್ಯತೆ ಇದೆ.
ಈ ಎರಡು ಹೊಸ ರೈಲುಗಳು ಮೇ–ಜೂನ್ ವೇಳೆಗೆ ಪರ್ಪಲ್ ಮತ್ತು ಗ್ರೀನ್ ಲೈನ್ಗಳಲ್ಲಿ ಸಂಚಾರ ಶುರು ಮಾಡುವ ನಿರೀಕ್ಷೆ ಇದೆ. ಇದರಿಂದ ಪೀಕ್ ಅವಧಿಯಲ್ಲಿ ಮೆಟ್ರೋದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಪರ್ಪಲ್ ಮತ್ತು ಗ್ರೀನ್ ಲೈನ್ಗಳಲ್ಲಿ ಒಟ್ಟು 57 ರೈಲುಗಳು ಸಂಚಾರ ಮಾಡುತ್ತಿವೆ.
For More Updates Join our WhatsApp Group :




